Wednesday, January 22, 2025
ಸುದ್ದಿ

ಡಾ.ಮಧುಕರ್ ಶೆಟ್ಟಿ ನಿಗೂಢ ಸಾವಿನ ತನಿಖೆ ಆರು ತಜ್ಞ ವೈದ್ಯರ ತಂಡ ಸಜ್ಜು – ಕಹಳೆ ನ್ಯೂಸ್

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ.ಮಧುಕರ್ ಶೆಟ್ಟಿ, 19 ವರ್ಷಗಳ ಸೇವಾ ಅವಧಿಯಲ್ಲಿ ಅಪೂರ್ವ ಹೆಜ್ಜೆ ಗುರುತುಗಳನ್ನ ಮೂಡಿಸಿದವರು, ನಂಬಿದ ಜನತೆಯ ರಕ್ಷಕರಾಗಿದ್ದ ಅಧಿಕಾರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷ, ಪ್ರಾಮಾಣಿಕ ಎಂದೇ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ಡಾ.ಮಧುಕರ್ ಶೆಟ್ಟಿಯವರ ಸಾವಿನ ಬಗ್ಗೆ ವ್ಯಕ್ತವಾಗಿದ್ದ ಅನುಮಾನಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಲು ಆರು ತಜ್ಞ ವೈದ್ಯರನ್ನು ಒಳಗೊಂಡ ವಿಚಾರಣಾ ಸಮಿತಿಯೊಂದನ್ನು ಸರಕಾರ ನೇಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯ ಈ ವಿಚಾರಣಾ ಸಮಿತಿಯ ಸದಸ್ಯರನ್ನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ, ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗದ ಡಾ.ಸೀತಾರಾಮ್ ಭಟ್, ನಿಮ್ಹಾನ್ಸ್ನ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ. ವಿ. ರವಿ, ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಎದೆರೋಗ ವಿಭಾಗದ ಡಾ.ನಾಗರಾಜ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ಇನ್ನೆರಡು ವಾರಗಳಲ್ಲಿ ವರದಿ ನೀಡುವಂತೆ ಸರಕಾರ ಆದೇಶದಲ್ಲಿ ತಿಳಿಸಿದೆ.

ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮಧುಕರ್ ಶೆಟ್ಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.25ರಂದು ಕೊನೆಯುಸಿರೆಳೆದಿದ್ದರು.

ಈ ಬೆಳವಣಿಗೆಗಳ ನಡುವೆಯೇ ಮಧುಕರ್ ಶೆಟ್ಟಿ ಸಾವಿನ ಕುರಿತಾಗಿ ಸಂದೇಹ ವ್ಯಕ್ತಪಡಿಸಿದ್ದ ಅವರ ಪತ್ನಿ ಹಾಗೂ ಸಹೋದರರು, ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಅಸಮರ್ಪಕ ಚಿಕಿತ್ಸೆ ನೀಡಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ್ದರು. ಈ ಎಲ್ಲ ಒತ್ತಾಯ, ಮನವಿಯ ಹಿನ್ನೆಲೆಯಲ್ಲಿ ಮಧುಕರ್ ಶೆಟ್ಟಿ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಮಧುಕರ್ ಶೆಟ್ಟಿಯವರಿಗೆ ನೀಡಲಾದ ಚಿಕಿತ್ಸೆ ಹಾಗೂ ಸಾವಿನ ಬಗ್ಗೆ ತನಿಖೆಗಾಗಿ ತಜ್ಞ ವೈದ್ಯರನ್ನೊಳಗೊಂಡ ಆರು ಮಂದಿಯ ವಿಚಾರಣಾ ಸಮಿತಿ ರಚಿಸಿದೆ.

ಅನಾರೋಗ್ಯ ಕಾರಣದಿಂದ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದ ಮಧುಕರ್ ಶೆಟ್ಟಿ ಅವರು ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದರು ಹೇಳಲಾಗಿತ್ತು. ಅದರ ಜೊತೆಗೆ ಅವರು ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ, ನಿಖರವಾಗಿ ಇಂತಹದ್ದೇ ಅನಾರೋಗ್ಯದಿಂದ ಅವರು ಮೃತಪಟ್ಟಿದ್ದರು ಎಂಬುದು ಬಹಿರಂಗಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾವಿಗೆ ಅಸಮರ್ಪಕ ಚಿಕಿತ್ಸೆ ಅಥವಾ ಬೇರೆ ಕಾರಣಗಳು ಇದ್ದಿರಬಹುದು ಎಂದು ಮಧುಕರ್ ಶೆಟ್ಟಿ ಆಪ್ತರು, ಶೆಟ್ಟಿಯನ್ನು ಹತ್ತಿರದಿಂದ ಬಲ್ಲ ಕೆಲವು ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಾರೆ.

ಮಧುಕರ್ ಶೆಟ್ಟಿ ಸಾವಿನ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ತಜ್ಞ ವೈದ್ಯರ ವಿಚಾರಣಾ ಸಮಿತಿ, ಅವರು ದಾಖಲಾಗಿದ್ದ ಕಾಂಟಿನೆಂಟಲ್ ಆಸ್ಪತ್ರೆಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಮಧ್ಯೆ ಸಮಿತಿ ಸದಸ್ಯರು ಸಭೆಯೊಂದನ್ನು ನಡೆಸಿದ್ದಾರೆ.
ವಿಚಾರಣಾ ಸಮಿತಿಯಲ್ಲಿ ಎಲ್ಲ ವಿಭಾಗಗಳ ತಜ್ಞರುಗಳಿದ್ದಾರೆ. ಸೂಕ್ತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.