ಮಂಡ್ಯ ಕ್ಷೇತ್ರದಲ್ಲಿ ತುಂಬಾ ಸದ್ದು ಮಾಡಿದ ಸಿಎಂ ಕುಮಾರಸ್ವಾಮಿ ಕುಟುಂಬ ವರ್ಸಸ್ ಅಂಬರೀಶ್ ಕುಟುಂಬ – ಕಹಳೆ ನ್ಯೂಸ್
ಮಂಡ್ಯ ಚುನಾವಣೆ ಮುಗಿದಿದೆ. ಉಳಿದ ಕ್ಷೇತ್ರಗಳಿಗಿಂತ ಮಂಡ್ಯ ಕ್ಷೇತ್ರ ತುಂಬಾ ಸದ್ದು ಮಾಡಿತ್ತು. ಯಾಕಂದ್ರೆ, ಇಲ್ಲಿ ಸಿಎಂ ಕುಮಾರಸ್ವಾಮಿ ಕುಟುಂಬ ವರ್ಸಸ್ ಅಂಬರೀಶ್ ಕುಟುಂಬ ಎನ್ನುವಂತಾಗಿತ್ತು. ನಿಖಿಲ್ ಪರವಾಗಿ ಇಡೀ ಸರ್ಕಾರವೇ ಪ್ರಚಾರ ಮಾಡಿದ್ರೆ, ಸುಮಲತಾ ಪರವಾಗಿ ಜೋಡೆತ್ತುಗಳಾಗಿ ನಟ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದರು.
ಮಂಡ್ಯದಲ್ಲಿ ಟೀಕೆ, ಟಿಪ್ಪಣಿಗಳು, ಆರೋಪ, ಪ್ರತ್ಯಾರೋಪಗಳು, ಅವಮಾನ, ಅಪವಾದಗಳು ಎಲ್ಲವನ್ನ ಜೋಡೆತ್ತುಗಳು ನೋಡಬೇಕಾಯಿತು. ಸಿನಿಮಾ ಬೇರೆ ರಾಜಕೀಯ ಬೇರೆ ಎನ್ನುತ್ತಿದ್ದ ದರ್ಶನ್ ಮತ್ತು ಯಶ್, ಅದೇ ಏನೇ ಆಗಲಿ ಒಂದು ಕೈ ನೋಡಿ ಬಿಡೋಣ ಅಂತ ಪಣ ತೊಟ್ಟು ಅಖಾಡಕ್ಕೆ ಇಳಿದಿದ್ದರು. ಇಷ್ಟೆಲ್ಲಾ ಆದ್ಮೇಲೆ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶದ ನಂತರ ಎದುರಾಳಿಗಳಿಗೆ ಉತ್ತರ ಕೊಡ್ತೇವೆ ಎಂದು ಪರಸ್ಪರ ಅಭ್ಯರ್ಥಿಗಳು ಸನ್ನದ್ದರಾಗಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಗೆದ್ದರೇ, ಜೋಡೆತ್ತುಗಳಿಗೆ ಆಗುವ ಅನುಕೂಲವೇನು?
ನಟ ದರ್ಶನ್ ಪ್ರಚಾರ ಮಾಡಿದ್ರೆ ಜನರು ಸೇರಬಹುದು ಆದ್ರೆ ವೋಟ್ ಆಗಿ ಬರಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರಿಗೂ ದರ್ಶನ್ ಪ್ರಚಾರ ಮಾಡಿದ್ರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸೋತ್ತಿದ್ದರು. ಈ ಅಪಖ್ಯಾತಿಯಿಂದ ದರ್ಶನ್ ಹೊರಬರಬಹುದು. ನಾನು ಪ್ರಚಾರ ಮಾಡಿದ ಸುಮಲತಾ ಗೆದ್ದಿದ್ದಾರೆ ಎಂದು ಕಾಲರ್ ಎತ್ತಬಹುದು.
ಅಂಬರೀಶ್ ಅಂದ್ರೆ ಮಂಡ್ಯದ ಗಂಡು ಅಂತಾನೆ ಖ್ಯಾತಿ. ಈಗ ಅಂಬರೀಶ್ ಇಲ್ಲ. ಅವರ ಬಳಿಕ ಮಂಡ್ಯ ಪಾಲಿಗೆ ಯಾರು ರಿಯಲ್ ಹೀರೋ ಆಗಬಹುದು ಎಂಬ ಲೆಕ್ಕಾಚಾರವೂ ಇದೆ. ಬಹುಶಃ ಸುಮಲತಾ ಗೆದ್ದರೇ ಮಂಡ್ಯದಲ್ಲಿ ಅಂಬರೀಶ್ ಪರ್ಯಾಯವಾಗಿ ದರ್ಶನ್ ಮತ್ತು ಯಶ್ ನಿಲ್ಲಬಹುದು. ಇನ್ನು ಅಂಬರೀಶ್ ಅಭಿಮಾನಿಗಳ ಒಲವು ಕೂಡ ಈ ಇಬ್ಬರ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ.
ಒಂದು ವೇಳೆ ನಟ ದರ್ಶನ್ ಅಥವಾ ಯಶ್ ಯಾರೇ ರಾಜಕೀಯಕ್ಕೆ ಬರಬೇಕು ಎಂದು ನಿರ್ಧರಿಸಿದರೇ, ಅವರಿಗೆ ಮಂಡ್ಯ ಉತ್ತಮ ವೇದಿಕೆ ಮಾಡಿಕೊಳ್ಳಬಹುದು. ಮಂಡ್ಯದಲ್ಲಿ ಈಗಾಗಲೇ ದೊಡ್ಡ ಮಟ್ಟದ ಅಭಿಮಾನಿಗಳನ್ನ ಸಂಪಾದಿಸಿರುವ ಜೋಡೆತ್ತುಗಳು, ಸುಮಲತಾ ಗೆಲ್ಲುವುದರಿಂದ ಮತ್ತಷ್ಟು ಬಲ ಹೆಚ್ಚಿಸಿಕೊಳ್ಳಬಹುದು. ರಾಜಕೀಯವಾಗಿ ಹಿಡಿತವನ್ನ ಸಾಧಿಸಬಹುದು.
ದರ್ಶನ್ – ಯಶ್ ನಡುವಿನ ಸಂಬಂಧ ಗಟ್ಟಿ
ಇಷ್ಟು ದಿನ ದರ್ಶನ್ ಮತ್ತು ಯಶ್ ನಡುವಿನ ಸಂಬಂಧ ಅಷ್ಟಕಷ್ಟೇ. ಆದ್ರೆ, ಸುಮಲತಾ ಪರ ಪ್ರಚಾರಕ್ಕೆ ನಿಂತ ಬಳಿಕ ಇಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಒಂದು ವೇಳೆ ಸುಮಲತಾಗೆ ಗೆಲುವು ಸಿಕ್ಕರೇ ಈ ಬಾಂಧವ್ಯ ಇನ್ನೂ ಬಲವಾಗುತ್ತೆ. ಮುಂದಿನ ದಿನದಲ್ಲಿ ಆಪ್ತಮಿತ್ರರಂತೆ ಇಂಡಸ್ಟ್ರಿ ಆಳಬಹುದು.
ಸಿಎಂ ಕುಟುಂಬವನ್ನ ಸೋಲಿಸಿದ ಖ್ಯಾತಿ
ದರ್ಶನ್ ಮತ್ತು ಯಶ್ ನಡುವೆ ಸಂಬಂಧ ಸರಿಯಿಲ್ಲ ಎಂದು ಬಿಂಬಿತವಾಗಿದೆ. ಅದರಿಂದ ಇಬ್ಬರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿರುವ ಉದಾಹರಣೆಗಳಿವೆ. ಬಹುಶಃ ಮಂಡ್ಯದಲ್ಲಿ ಸುಮಲತಾ ಗೆಲವು, ಇಂಡಸ್ಟ್ರಿ ಮೇಲೂ ಪರಿಣಾಮ ಬೀರಬಹುದು. ಇಷ್ಟು ದಿನ ಇದ್ದ ಅಬ್ಬರಕ್ಕಿಂತ ಮುಂದಿನ ದಿನದಲ್ಲಿ ಈ ಹವಾ ಹೆಚ್ಚಾಗಬಹುದು. ಸಿಎಂ ಕುಟುಂಬವನ್ನ ಎದುರು ಹಾಕಿಕೊಂಡು ಗೆದ್ದು ಬಂದಿದ್ದೇವೆ ಎಂಬ ಬ್ಯಾಡ್ಜ್ ಸಿಗುತ್ತೆ.