ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಡಿಸೆಂಬರ್ 1ರಿಂದ 3ರವರೆಗೆ ಜರುಗಲಿದೆ.
14ನೇ ವರ್ಷದ ಸಮ್ಮೇಳನವಿದಾಗಿದ್ದು ‘ಆಳ್ವಾಸ್ ನುಡಿಸಿರಿ 2017’ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜನೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಡಿಸೆಂಬರ್ 1ರಂದು ಸಮ್ಮೇಳನ ಉದ್ಘಾಟನೆ ಆಗಲಿದ್ದು, 3ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರ ಅಂತಿಮ ವಿವರ ನೀಡಲಾಗುವುದು. ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಲಾಗುತ್ತದೆ ಎಂದು ಆಳ್ವ ಅವರು ತಿಳಿಸಿದರು.
ಸಮ್ಮೇಳನದ ಪ್ರತಿನಿಧಿಯಾಗಬಯಸುವ ಕನ್ನಡಾಭಿಮಾನಿಗಳು 100 ರೂ. ಶುಲ್ಕ ನೀಡಿ ಸದಸ್ಯರಾಗಬಹುದು, ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಸಮ್ಮೇಳನ ಆಯೋಜನೆಗೆ ಸಿದ್ಧತೆ ನಡೆಯುತ್ತಿದ್ದು, ಕನ್ನಡ ನಾಡು ನುಡಿ ಸಂಸ್ಕೃತಿ ಪ್ರಿಯ ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ನುಡಿಸಿರಿ ಸಮ್ಮೇಳನಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಾಗಿ 08258- 261229 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.