ಮುಂಬೈ:
ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ತೆರೆಗೆ ಬರುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಕಾನೂನು ಹಂತದಲ್ಲಿರುವ ಈ ಚಿತ್ರವನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇದೀಗ ಮೋದಿಯವರ ವೆಬ್ ಸೀರೀಸ್ ಕೂಡ ಬರುತ್ತದೆ ಎನ್ನುವ ವಿಚಾರ ಗೊತ್ತಿರುವುದೇ. ಸಿನಿಮಾ ಅಂತೂ ಲೇಟ್ ಆಯ್ತು. ವೆಬ್ ಸೀರೀಸ್ ಅನ್ನಾದ್ರೂ ನೋಡಬಹುದು ಎನ್ನುತ್ತಿದ್ದ ಅಭಿಮಾನಿಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.
ವೆಬ್ ಸೀರಿಸ್ ಹಾಕದಂತೆ ಸೂಚನೆ
ಮೋದಿ ಜರ್ನಿ ಆಫ್ ಎ ಕಾಮನ್ ಮ್ಯಾನ್. ಎಂಬ ವೆಬ್ ಸೀರೀಸ್ ರೆಡಿಯಾಗಿತ್ತು. ಇನ್ನೂ ವೆಬ್‌ಸೈಟ್‌ನಲ್ಲೂ ಕೆಲವೊಂದು ಸೀರೀಸ್ ಲಭ್ಯವಿತ್ತು. ಹನ್ನೆರಡು ವರ್ಷದವರಾಗಿದ್ದಾಗಿನಿಂದ ಪ್ರಧಾನಿಯಾಗುವವರೆಗೆ ಯಾವೆಲ್ಲ ಕಷ್ಟ, ಸವಾಲುಗಳನ್ನು ಎದುರಿಸಿದರು ಎಂಬ ಬಗ್ಗೆ ತಿಳಿಸಲಾಗಿತ್ತು.ಆದರೆ ಈ ಸೀರೀಸ್ ಬಿಡುಗಡೆ ಮಾಡುವಂತಿಲ್ಲ. ಏಪ್ರಿಲ್ 3ರಿಂದ ಈ ವೆಬ್ ಸೀರೀಸ್‌ನ ಎಪಿಸೋಡ್‌ಗಳು ಪ್ರಕಟವಾಗಿವೆ. ಈಗಾಗಲೇ ಐದು ಎಪಿಸೋಡ್‌ಗಳು ಪ್ರಕಟವಾಗಿದ್ದು, ಇವೆಲ್ಲವನ್ನು ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಎರೋಸ್ ನೌ ಗೆ ಸೂಚನೆ ನೀಡಿರುವುದು ವರದಿಗಳಾಗಿವೆ.
ಚುನಾವಣೆ ಹಿನ್ನೆಲೆ ಬ್ಯಾನ್
ಚುನಾವಣಾ ಆಯೋಗದ ಮೆಟ್ಟಿಲೇರಿದ್ದ ಕಾಂಗ್ರೆಸ್, ವೆಬ್ ಸೀರೀಸ್ ರಿಲೀಸ್ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿತ್ತು. ಅಲ್ಲದೆ ಈ ವಿಚಾರವಾಗಿ ಅನೇಕ ವಿರೋಧಗಳು ಕೂಡ ಕೇಳಿ ಬಂದವು. ಅದರಂತೆ ಚುನಾವಣಾ ಆಯೋಗ ಇದೀಗ ಸೂಚನೆ ನೀಡಿದೆ. ಮೋದಿಯವರು ಸದ್ಯ ಪ್ರಧಾನಿಯಾಗುವುದರ ಜೊತೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ವೆಬ್ ಸೀರೀಸ್, ಸಿನಿಮಾ ತೆರೆಗ ಬಂದರೆ ಮತದಾರರ ಮೇಲೆ ಪರಿಣಾಮ ಬೀರಲಿದೆ ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.