ಅಪ್ರಾಪ್ತ ಬಾಲಕನಿಗೆ ಇಳಿಯಲು ಅವಕಾಶ ನೀಡದೆ ನಡೆಯುವ ಶಿಕ್ಷೆ ನೀಡಿದ ಬಸ್ ನಿರ್ವಾಹಕ: ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳದ ಪುಂಜಾಲಕಟ್ಟೆ ಎಂಬಲ್ಲಿ ತನ್ನ ಮನೆಯವರೊಂದಿಗೆ ಸರ್ಕಾರಿ ಬಸ್ಸಿನಲ್ಲಿ ಬಂದಿದ್ದ ಅಪ್ರಾಪ್ತ ಬಾಲಕನಿಗೆ ಇಳಿಯಲು ಅವಕಾಶ ನೀಡದೆ ನಡೆಯುವ ಶಿಕ್ಷೆ ನೀಡಿದ ಬಸ್ ನಿರ್ವಾಹಕನಿಗೆ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಬೆಳ್ತಂಗಡಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಸರ್ಕಾರಿ ಗ್ರಾಮೀಣ ಸಾರಿಗೆ ಬಸ್ಸಿನಲ್ಲಿ ಪುಟ್ಟ ಸಂಸಾರವೊಂದು ಪುಂಜಾಲಕಟ್ಟೆ ಬಸ್ ನಿಲ್ದಾಣದಲ್ಲಿ ಇಳಿದಿದೆ. ಆದರೆ ಇವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕನಿಗೆ ಅವರು ಇಳಿಯುತ್ತಿರುವುದು ಗೊತ್ತಾಗಿಲ್ಲ. ಇದರಿಂದಾಗಿ ಬಸ್ ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದಂತೆಯೇ ಕೆಳಗೆ ಇಳಿದಿದ್ದ ಬಾಲಕನ ತಾಯಿ ಬೊಬ್ಬೆ ಹಾಕಿದ್ದಾರೆ. ತಕ್ಷಣವೇ ಬಾಲಕನು ಸೀಟಿನಿಂದ ಎದ್ದು ಬಂದು ಬಸ್ಸಿನ ನಿರ್ವಾಹಕನಲ್ಲಿ ಬಸ್ ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾನೆ. ಇದೇ ವೇಳೆ ಪ್ರಯಾಣಿಕರು ಕೂಡಾ ಬಸ್ಸು ನಿಲ್ಲಿಸುವಂತೆ ವಿನಂತಿಸಿಕೊಂಡರೂ ಬಸ್ಸಿನ ನಿರ್ವಾಹಕ ಉಡಾಫೆಯಿಂದ ಉತ್ತರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಬಸ್ಸಿನ ಎಲ್ಲಾ ಪ್ರಯಾಣಿಕರು ಎದ್ದು ನಿಂತು ಬಸ್ಸು ನಿಲ್ಲಿಸುವಂತೆ ಆಗ್ರಹಿಸಿ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟರಲ್ಲಿ ಬಸ್ ಬಂಗ್ಲೆ ಮೈದಾನ ಸಮೀಪದ ಪೆಟ್ರೋಲ್ ಪಂಪಿನ ಬಳಿ ನಿಲ್ಲಿಸಿ ಬಾಲಕನು ಮತ್ತೆ ವಾಪಾಸು ನಡೆಯುವ ಶಿಕ್ಷೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎ-19 ಎಫ್-2815 ನಂಬರಿನ ಈ ಸರ್ಕಾರಿ ಬಸ್ಸಿನಲ್ಲಿ ನಿರ್ವಾಹಕನ ಜೇಬಿನಲ್ಲಿ ಹೆಸರಿನ ಬ್ಯಾಜ್ ಕೂಡಾ ಇರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.