ಜೀವನ ಪಾಠ
ಮುಗುಳುನಗು ಇರುವವನ ಹಸನಾದ ಮೊಗವು|
ಹುಣ್ಣಿಮೆಯ ಚಂದ್ರಮನ ಮುಖಕಾಂತಿ ಚೆಲುವು||
ತಿಳಿಹಾಸ್ಯ ಬೆರೆತಾಗ ಜನುಮದ ನಡುವೆ|
ಬಾನಿನಲಿ ಧ್ರುವತಾರೆ ಮಿನುಗುತಿಹ ಪರಿವೆ||೧||
ಕಷ್ಟಗಳು ಇದ್ದಾವು ನಷ್ಟಗಳು ಬಂದಾವು|
ಮನದಿಷ್ಟ ಮನಗಳಲೆ ಹಾಗೆ ಉಳಿದಾವು||
ಅಂದು ಕಥೆಯಾಗಿ ಇಂದಿಗದು ವ್ಯಥೆಯಾಗಿ|
ಸ್ಥಿರವಲ್ಲ ಈ ಜಗದಿ ವ್ಯತಿರಿಕ್ತವಾಗಿ||೨||
ಬೇಸರವು ಬಂದಾಗ ಗ್ರಹಚಾರ ಕೆಟ್ಟಾಗ |
ವಿಧಿ ಮೊದಲೆ ಹಣೆಯೊಳದ ಗೀಚಿದಾಗ||
ಬೊಚ್ಚುಮೋರೆಯ ಹಾಕಿ ಚಪ್ಪರಿಸಿ ಮೇಲ್ನೋಡಿ|
ಒಳ ಮನಸ ಕದ ಬಿಚ್ಚಿ ನಗಲೇನು ದಾಡಿ||೩||
ಕನ್ನಡದ ಅಕ್ಷರವ ಒಂದೊಂದೆ ಕಲಿತೆ|
ಹಿಂದೇ ನೀ ಕಲಿತುದರ ಇಂದೆ ನೀ ಮರೆತೆ||
ಮುಂದೆ ನೀ ಕಲಿಯಲಿದೆ ಮುಗಿದಿಲ್ಲ ಆಟ|
ಜೀವನವೆ ಬ್ರಹ್ಮಾಂಡ ಕಲಿ ಜೀವನದ ಪಾಠ||೪||
ಹರೆಯವಾದರು ನೀನು ನಕ್ಕಾಗ ಕುವರ|
ರೋಗ ಬಂದರು ತಾ ಓಡುವದು ಯೋಜನ ದೂರ||
ನಗುನಗುತ ನಗಿಸುವುದು ಸಹಜವದು ಭಾಗ್ಯ|
ಪರರ ನಗಿಸುತ ನಗುವೆ ಶ್ಲಾಘನೆಗೆ ಯೋಗ್ಯ ||೫||