ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಶ್ಯಾಂಪೂ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಒಂದಿದೆ, ಹೌದು ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಶ್ಯಾಂಪೂ ಮಾರಾಟವನ್ನು ತಕ್ಷಣ ನಿಷೇಧಿಸುವಂತೆ ಹಾಗೂ ಮಾರಾಟ ಮಳಿಗೆಗಳಲ್ಲಿ ಇರುವ ಈ ಶ್ಯಾಂಪೂ ದಾಸ್ತಾನನ್ನು ತಕ್ಷಣ ಹಿಂದೆಗೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜಸ್ಥಾನ ಔಷಧ ನಿಯಂತ್ರಕರ ಕಚೇರಿಯು ಶ್ಯಾಂಪೂ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ನೀಡಿದ ವರದಿ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸೂಚಿಸಲಾಗಿದೆ. ರಾಜಸ್ಥಾನದಲ್ಲಿ ಸಂಗ್ರಹಿಸಿದ ಶ್ಯಾಂಪೂ ಮಾದರಿಯ ಪರೀಕ್ಷೆಯಿಂದ ಇದರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಹಾನಿಕಾರಕ ವಸ್ತುಗಳು ಇರುವುದು ಪತ್ತೆಯಾಗಿದೆ ಎಂದು ರಾಜಸ್ಥಾನ ಔಷಧ ನಿಯಂತ್ರಕರ ಕಚೇರಿ ಅಭಿಪ್ರಾಯಪಟ್ಟಿತ್ತು.
ಮುಂದಿನ ಸೂಚನೆ ನೀಡುವವರೆಗೆ ಈ ಉತ್ಪನ್ನದ ಮಾರಾಟವನ್ನು ತಡೆಹಿಡಿಯುವಂತೆ ಎನ್‍ಸಿಪಿಸಿಆರ್ ಶಿಫಾರಸು ಮಾಡಿದ್ದು, ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆಯೂ ಕೋರಿದೆ. ಈ ಬಗ್ಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪ್ರತಿಕ್ರಿಯೆ ಕೋರಿದಾಗ ಯಾವ ಸ್ಪಂದನೆಯೂ ಸಿಕ್ಕಿಲ್ಲ.
ರಾಜಸ್ಥಾನ ಸರ್ಕಾರದ ವರದಿ ಹಾಗೂ ಜೈಪುರದ ಔಷಧ ಪರೀಕ್ಷಾ ಪ್ರಯೋಗಾಲಯ ನಡೆಸಿದ ಪರೀಕ್ಷಾ ವರದಿಯನ್ನು ಉಲ್ಲೇಖಿಸಿ ಎನ್‍ಸಿಪಿಸಿಆರ್ ಈ ಸೂಚನೆ ನೀಡಿದೆ. ಪ್ರಯೋಗಾಲಯ ವರದಿಯ ಪ್ರಕಾರ, ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಶ್ಯಾಂಪೂ ನಿಗದಿತ ಗುಣಮಟ್ಟವನ್ನು ಹೊಂದಿಲ್ಲ ಹಾಗೂ ಇದರಲ್ಲಿ ಫಾರ್ಮಲ್ಡಿಹೈಡ್ ಇರುವುದು ದೃಢಪಟ್ಟಿದೆ.
ರಾಜಸ್ಥಾನ ಸರ್ಕಾರದ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಈಗಾಗಲೇ ಈ ಉತ್ಪನ್ನದ ಮೇಲೆ ತೀವ್ರ ನಿಗಾ ಇರಿಸಿದೆ. ಕಂಪೆನಿಯ ಮತ್ತೊಂದು ಉತ್ಪನ್ನವಾದ ಬೇಬಿ ಪೌಡರ್ ಪರೀಕ್ಷಾ ವರದಿಯನ್ನು ಕೂಡಾ ಶೀಘ್ರವಾಗಿ ಸಲ್ಲಿಸುವಂತೆ ಎನ್‍ಸಿಪಿಸಿಆರ್, ರಾಜಸ್ಥಾನ ಸರ್ಕಾರವನ್ನು ಕೋರಿದೆ.