ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಎರಡು ವರ್ಷ ಮುಂಚೆಯೇ ತಿಳಿದಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಪರಿಶಿಷ್ಟ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಅವರು ನಿನ್ನೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ದೇಶದ್ರೋಹ, ದೇಶದ ಸಾರ್ವಭೌಮತೆಗೆ ಧಕ್ಕೆ, ಅಪರಾಧ ಸಂಚನ್ನು ಮುಚ್ಚಿಟ್ಟಿರುವುದು, ಪ್ರಮಾಣ ವಚನದ ಉಲ್ಲಂಘನೆ ಅಪರಾಧಗಳಿಗಾಗಿ ಐಪಿಸಿ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅವರು ಮನವಿ ಮಾಡಿದ್ದಾರೆ.
‘ಪುಲ್ವಾಮಾ ದಾಳಿ ಬಗ್ಗೆ ಎಚ್‍ಡಿಕೆಗೆ ರೇವಣ್ಣನೇ ಭವಿಷ್ಯ ಹೇಳಿರಬೇಕು’
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 45 ಯೋಧರು ಬಲಿಯಾಗಿದ್ದರು. ಈ ದಾಳಿ ನಡೆಯುತ್ತದೆ ಎಂದು ತಮಗೆ ಎರಡು ವರ್ಷ ಮೊದಲೇ ತಿಳಿದಿತ್ತು. ಈ ವಿಚಾರವನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ತಮಗೆ ಆಗಲೇ ಮಾಹಿತಿ ನೀಡಿದ್ದರು ಎಂದು ಏಪ್ರಿಲ್ 5ರಂದು ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ದಾಳಿಯ ಕುರಿತು ಗೊತ್ತಿದ್ದರೂ ಸುಮ್ಮನೆ ಇರುವ ಮೂಲಕ 45 ಸೈನಿಕರ ಸಾವಿಗೆ ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆ ಎಂದು ರಾಮು ಅವರು ದೂರಿನಲ್ಲಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಕೊಪ್ಪದಲ್ಲಿ ಮಾಡಿದ್ದ ಭಾಷಣದ ಧ್ವನಿಮುದ್ರಣದ ಸಿಡಿಯನ್ನು ಕೂಡ ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಷ್ಟ್ರಮಟ್ಟದಲ್ಲಿ ಈ ಹೇಳಿಕೆ ಕುರಿತು ಚರ್ಚೆಗಳು ನಡೆದಿದ್ದವು. ಕುಮಾರಸ್ವಾಮಿ ಅವರಿಗೆ ಈ ದಾಳಿ ಬಗ್ಗೆ ಮೊದಲೇ ತಿಳಿದಿದ್ದರೆ ಅದನ್ನು ಉನ್ನತ ಅಧಿಕಾರಿಗಳಿಗೆ, ರಾಷ್ಟ್ರಪತಿ ಅವರಿಗೆ ತಿಳಿಸಬೇಕಿತ್ತು. ದಾಳಿ ನಡೆಯುತ್ತದೆ ಎಂದು ಗೊತ್ತಿದ್ದರೂ ಸುಮ್ಮನಿದ್ದದ್ದು ಅಪರಾಧ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಲಾಗಿತ್ತು.