ಜಗತ್ತಿನಾದ್ಯಂತ ಏರ್ ಇಂಡಿಯಾ ಸೇವೆಯಲ್ಲಿ ಪದೇ ಪದೇ ತಾಂತ್ರಿಕ ತೊಂದರೆಗಳಾಗುತ್ತಿದ್ದು, ಇಂದು ನಸುಕಿನಿಂದ ಆರು ಗಂಟೆಗಳ ಕಾಲ ವ್ಯತ್ಯಯವಾಗಿದ್ದು ವಿಶ್ವದ ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ಪ್ರಯಾಣಿಕರು ಪರದಾಡಬೇಕಾಯಿತು.
ಮೂರರ ನಸುಕಿನಲ್ಲಿ ಸರ್ವರ್ ಡೌನ್ ಸಮಸ್ಯೆ ಕಾಣಿಸಿಕೊಂಡು ಆ ಬಳಿಕ ಬೆಳಿಗ್ಗೆ 9ಗಂಟೆಯವರೆಗೆ ಏರ್ ಇಂಡಿಯಾ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿ ಸಹಸ್ರಾರು ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.
ಅಮೆರಿಕದ ಅಟ್ಲಾಂಟಾ ಮೂಲದ ಸಿಟಾ ಕಂಪನಿಯ ಈ ಸಾಫ್ಟ್ ವೇರ್ 6 ತಾಸುಗಳ ಕಾಲ ಸ್ಥಗಿತಗೊಂಡಿದ್ದರಿಂದ ಏರ್ ಇಂಡಿಯಾ ವಿಮಾನಗಳ ಹಾರಾಟಗಳ ಭಾರೀ ವ್ಯತ್ಯಯವಾಗಿ ಎಲ್ಲವೂ ಅಯೋಮಯವಾಯಿತು.
ವಾಷಿಂಗ್‍ಟನ್, ನ್ಯೂಯಾರ್ಕ್, ಲಂಡನ್, ಬರ್ಲಿನ್,ಸಿಡ್ನಿ ಸೇರಿದಂತೆ ವಿವಿಧ ದೇಶಗಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ಪ್ರಯಾಣಿಕರು ಸುಮಾರು ಆರು ಗಂಟೆಗಳ ಕಾಲ ವಿಮಾನಗಳನ್ನು ಏರಲು ಸಾಧ್ಯವಾಗಲಿಲ್ಲ.
ಏರ್ ಇಂಡಿಯಾ ವಕ್ತಾರರು ಈ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ. ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ತಂತ್ರಜ್ಞರು ಬೆಳಿಗ್ಗೆ 9.30ರಲ್ಲಿ ದುರಸ್ತಿಗೊಳಿಸಿದ್ದಾರೆ. ಈಗ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಸೇವೆಯಲ್ಲಿನ ವ್ಯತ್ಯಯಕ್ಕೆ ತೀವ್ರ ವಿಷಾದ ವ್ಯಕ್ತ ಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ವಾಯುಯಾನ ಶಮತೆಯ ವಿಶ್ವಾಸ ಕಳೆದುಕೊಳ್ಳುತ್ತಿರುವ ಭಾರತದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ ನೂರಾರು ಮಂದಿ ತಮ್ಮ ಕಾರ್ಯಕ್ರಮಗಳು ಏರುಪೇರಾದ ಬಗ್ಗೆ ಪ್ರಯಾಣಿರು ಹಿಡಿಶಾಪ ಹಾಕುವಂತಾಗಿದೆ.