ರೈತರ ಸಾಲ ಮನ್ನಾ ಮಾಡುತ್ತೆವೆ ಎಂದು ಹೇಳಿಕೊಂಡು ಬರುತ್ತಿರುವ ಸರಕಾರ ಇದೀಗ ಮತ್ತೆ ಸಾಲ ಮನ್ನಾ ವಿಚಾರಕ್ಕೆ ಕೈ ಹಾಕಿದೆ. ಲೋಕಸಭೆ ಚುನಾವಣೆ ಕಾರಣದಿಂದ ಅರ್ಹ ರೈತರ ಸಾಲಮನ್ನಾ ಮೊತ್ತವನ್ನು ಬಿಡುಗಡೆ ಮಾಡಿರಲಿಲ್ಲ. ಈಗ ಚುನಾವಣಾ ಆಯೋಗ ಸಾಲಮನ್ನಾ ಮೊತ್ತವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದೆ.
ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನೀತಿ ಸಂಹಿತೆ ಜಾರಿಗೆ ಮೊದಲು ಗುರುತಿಸಲಾಗಿದ್ದ ಅರ್ಹ ರೈತರ ಸಾಲಮನ್ನಾ ಮೊತ್ತವನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಚುನಾವಣೆ ಆಯೋಗದ ನಿರ್ದೇಶನದ ಹಿನ್ನೆಲೆಯಲ್ಲಿ ಮಾರ್ಚ್ 11 ರಿಂದ ರಾಜ್ಯ ಸರ್ಕಾರ ಸಾಲ ಮನ್ನಾ ಹಣ ಬಿಡುಗಡೆಯನ್ನು ನಿಲ್ಲಿಸಿತ್ತು.
ಈಗ ರಾಜ್ಯದಲ್ಲಿ 2 ಹಂತಗಳಲ್ಲಿ ಮತದಾನ ಮುಗಿದ ಕಾರಣ, ಹಣ ಬಿಡುಗಡೆ ಮಾಡಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಸಹಕಾರ ಸಂಸ್ಥೆಗಳಿಂದ ಪಡೆದ 1 ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಇದುವರೆಗೆ 4.10 ಲಕ್ಷ ಫಲಾನುಭವಿಗಳ ಸಾಲ ಮನ್ನಾ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ ವರೆಗಿನ ಅರ್ಹ ಫಲಾನುಭವಿಗಳ ಸಾಲಮನ್ನಾ ಮೊತ್ತ 880 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ.
ಮೇ 25 ರವರೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಲ ಮನ್ನಾಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲಮನ್ನಾ ಮೊತ್ತ ಬಿಡುಗಡೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗಲಿದೆ. ಈ ಕಾರಣದಿಂದ ಅರ್ಹರನ್ನು ಗುರುತಿಸಿ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಸಾಲಮನ್ನಾ ಮೊತ್ತ ಬಿಡುಗಡೆ ಮಾಡಲು ಅನುದಾನವನ್ನು ಖಜಾನೆಯಲ್ಲಿ ಠೇವಣಿ ಇಡಲು ಸರಕಾರಕ್ಕೆ ಸಹಕಾರ ಇಲಾಖೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.