ಬೆಂಗಳೂರು: ಒಳಚರಂಡಿ ದುರಸ್ತಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ. ಬೆಂಗಳೂರಿನ ಕೆಜಿ ಹಳ್ಳಿ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚೋಟು ಮತ್ತು ಗಫೂರ್ ಎಂಬುವವರು ಮೃತಪಟ್ಟಿದ್ದಾರೆ. ಕೆಜಿ ಹಳ್ಳಿ ಸಮೀಪ ಒಂದು ಟೀ ಅಂಗಡಿ ಇದೆ. ಆ ಟೀ ಅಂಗಡಿಯಿಂದ ಬಂದಂತಹ ನೀರು, ಇನ್ನಿತರೆ ಪದಾರ್ಥಗಳು ಹೋಗಿ ಒಂದು ಹೊಂಡದಲ್ಲಿ ಶೇಖರಣೆಯಾಗುತ್ತಿತ್ತು.
ಅದನ್ನು ಸರಿಪಡಿಸಲು ಈ ಇಬ್ಬರು ಕಾರ್ಮಿಕರಿಗೆ ಸ್ವಲ್ಪ ಹಣ ನೀಡಿ ಕರೆಸಿಕೊಳ್ಳಲಾಗಿತ್ತು. ಆದರೆ ಕೆಲಸ ನಡೆಯುತ್ತಿರುವ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು ಇನ್ನೂ ಕೂಡ ಇಂತಹ ಸಮಸ್ಯೆಯಿಂದ ಹೊರಬರಲಾಗಿಲ್ಲ.
ಚರಂಡಿ ಶುಚಿಗೊಳಿಸಲು ಮಾನವ ನಿರ್ಮಿತ ಹಲವು ಉಪಕರಣಗಳು ಬಂದಿದೆ ಆದರೆ ಅದನ್ನು ಯಾರೂ ಬಳಕೆ ಮಾಡುತ್ತಿಲ್ಲ, ವರ್ಷಕ್ಕೆ ನೂರಾರ ಕಾರ್ಮಿಕರು ಹೀಗೆ ಸಾವನ್ನಪ್ಪುತ್ತಲೇ ಇದ್ದಾರೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ, ಕಡಿಮೆ ಖರ್ಚಿನಲ್ಲಿ ಕೆಲಸವಾಗುತ್ತೆ ಎನ್ನುವ ಮನೋಭಾವದಿಂದಲೇ ಮುಗ್ಧ ಜೀವಗಳ ಬಲಿ ಕೊಡುತ್ತಿದ್ದಾರೆ.