Saturday, November 23, 2024
ಸುದ್ದಿ

ಯುವ ವಿಜ್ಞಾನಿ ಸ್ವಸ್ತಿಕ್ ಪದ್ಮ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಸ್ವಸ್ತಿಕ್ ಪದ್ಮ ಕೇವಲ ಊರಿಗೆ ಮಾತ್ರವಲ್ಲದೆ ರಾಷ್ಟ್ರಕ್ಕೇ ಗೌರವ ತಂದ ಹೆಮ್ಮೆಯ ಯುವ ವಿಜ್ಞಾನಿ. ಅಮೇರಿಕದಂತಹ ಪ್ರಬಲ ರಾಷ್ಟ್ರ ಈತನ ವಿಜ್ಞಾನ ಸಾಧನೆಗೆ ಬೆರಗಾಗಿ ಪುಟ್ಟ ಗ್ರಹವೊಂದಕ್ಕೆ ಈತನದೇ ಹೆಸರನ್ನು ಇಟ್ಟಿದೆ ಎಂದರೆ ಈ ಹುಡುಗನ ಸಾಧನೆ ಅನಾವರಣಗೊಳ್ಳುತ್ತದೆ. ಇನ್ನು, ನಮ್ಮ ದೇಶದ ರಾಷ್ಟ್ರಪತಿ ಅವರಿಂದ ಬಾಲ ಪುರಸ್ಕಾರ ಪಡೆದುಕೊಂಡ ಹುಡುಗ ಈಗ ತಾನೇ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ತನ್ನ ಪಿಯು ಶಿಕ್ಷಣ ಮುಗಿಸಿ ಮುಂದಿನ ಶೈಕ್ಷಣಿಕ ಬದುಕಿಗಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜನ್ನು ಆರಿಸಿಕೊಂಡಿದ್ದಾನೆ.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಲಿಯಲು ಹೆಚ್ಚಿನ ಅವಕಾಶಗಳ ಜತೆಗೆ ಹಲವು ಆವಿಷ್ಕಾರಗಳನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗೂ ವಿವೇಕಾನಂದ ಕಾಲೇಜಿನ ಜತೆಗೆ ಒಂದು ರೀತಿಯ ಅವಿನಾಭಾವ ಸಂಬಂಧ ಇರುವ ಕಾರಣ ತನ್ನ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ ಮುಂದುವರಿಸಲು ಮುಂದಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ನಡೆಸುತ್ತಿದ್ದಾಗಲೇ ಯುವ ವಿಜ್ಞಾನಿ ಎಂಬ ಹೆಗ್ಗಳಿಕೆ, ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪುರಸ್ಕಾರಗಳನ್ನು ಪಡೆದು ವಿಶ್ವವೇ ಪುತ್ತೂರಿನತ್ತ ನೋಡುವಂತೆ ಮಾಡಿದ್ದ ಬಾಲ ಪ್ರತಿಭೆ ಸ್ವಸ್ತಿಕ್ ಪದ್ಮ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಸಾಚ್ಯುಸೆಟ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋರೇಟರಿ ಆ್ಯಂಡ್ ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಪುಟ್ಟ ಗ್ರಹಕ್ಕೆ ಇವನ ಹೆಸರನ್ನು ನಾಮಕರಣ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಐಎಸ್‍ಇಎಫ್-2018 (ಇಂಟರ್‍ನ್ಯಾಶನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್- 2018)ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳದಲ್ಲಿ ಇವನ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು ಈ ಗೌರವವನ್ನು ಸಲ್ಲಿಸಲಾಗಿದೆ.

ರಾಷ್ಟ್ರಪತಿಯಿಂದ ಬಾಲ ಪುರಸ್ಕಾರ ಪ್ರಶಸ್ತಿ
ಈ ಹಿಂದೆ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ಇವನು ದೇಶದ ಹೆಮ್ಮೆಯ ಬಾಲ ವಿಜ್ಞಾನ ಸಾಧಕ. 2017ರ ನ. 14ರಂದು ರಾಷ್ಟ್ರಪತಿ ಅವರಿಂದ ಬಾಲ ಪುರಸ್ಕಾರ ಪಡೆದುಕೊಂಡಿದ್ದ. ಎನ್‍ಸಿಎಸ್‍ಸಿ ಯುವ ವಿಜ್ಞಾನಿ ಪ್ರಶಸ್ತಿ, ಅಹ್ಮದಾಬಾದ್‍ನಲ್ಲಿ ನಡೆದ ಪ್ಲಾಸ್ಟಿಕ್ ಎಕ್ಸಿಬಿಷನ್‍ನಲ್ಲಿ ಅಂತಾರಾಷ್ಟ್ರೀಯ ಪ್ಲಾಸ್ಟ್ ಐಕಾನ್ ಅವಾರ್ಡ್, ಅಮೆರಿಕ ಸ್ಟ್ಯಾಂಡರ್ಡ್ ಮೆಟಿರಿಯಲ್ ಎಜುಕೇಶನ್ ಫೌಂಡೇಶನ್ ಔಟ್ ಸ್ಟ್ಯಾಂಡಿಂಗ್ ಅಚ್ಯುವ್‍ಮೆಂಟ್ ಇನ್ ಮೆಟಿರಿಯಲ್ ಸೈನ್ಸ್ ಅವಾರ್ಡ್ ಅನ್ನು ಸಹ ಪಡೆದಿದ್ದಾನೆ.
ಸಾಧನೆ

2017ರಲ್ಲಿ ಇಂಟರ್ ನ್ಯಾಷನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್‍ನಲ್ಲಿ ಪುನರ್ಬಳಕೆ ಆಗದ ಪ್ಲಾಸ್ಟಿಕ್ ಸ್ಲ್ಯಾಗ್ ಬಳಸಿ ಕಬ್ಬಿಣಕ್ಕಿಂತಲೂ ಗಟ್ಟಿಯಾದ ವಸ್ತುವೊಂದನ್ನು ತಯಾರಿಸಿದ್ದ. 2018ರಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು 6 ತಿಂಗಳ ಮೊದಲೇ ಕಂಡು ಹಿಡಿಯುವ ಹಾಗೂ ಬಾಯಿಯ ಕ್ಯಾನ್ಸರ್ ಅನ್ನು ಬೇಗನೇ ಕಂಡುಹಿಡಿಯುವ ಪೇಪರ್ ಸ್ಲಿಪ್ ಅನ್ನು ಕಂಡುಹಿಡಿದಿದ್ದ. ಹಾಗೂ ಇದರ ಆವಿಷ್ಕಾರ ಮುಂದುವರೆದಿದೆ. ಈಗ ಈತ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸೇರಿರುವುದು ಆತನ ಆವಿಷ್ಕಾರ ಮನೋಭಾವವನ್ನು ಇನ್ನಷ್ಟು ಬೆಳೆಸಲು ಸಹಕಾರಿಯಾಗಲಿದೆ.

ಇಂಜಿನಿಯರಿಂಗ್‍ನಲ್ಲಿ ಹಲವು ಅವಕಾಶ
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಲಿಯಲು ಹಲವು ಅವಕಾಶಗಳು ಇವೆ. ಹಾಗಾಗಿ ಇಂಜಿನಿಯರಿಂಗ್ ಕಲಿಯಲು ಆಸಕ್ತಿಯನ್ನು ವಹಿಸಿದೆ. ಪ್ರಸ್ತುತ ಎನರ್ಜಿ ಆ್ಯಂಡ್ ಡೇಟ ಟ್ರಾನ್ಸ್‍ಮಿಶನ್ ಕುರಿತು ಸಂಶೋಧನೆಯಲ್ಲಿ ತೊಡಗಿದ್ದು. ಹಿಂದಿನ ಮೂರು ಆವಿಷ್ಕಾರಕ್ಕೆ ಪೇಟೆಂಟ್ ಮಾಡುವ ಪ್ರಕ್ರೀಯೆಯತ್ತ ಗಮನಹರಿಸುತ್ತಿದ್ದೇನೆ. ಇದು ಪೂರ್ಣಗೊಂಡ ಬಳಿಕ ಅವುಗಳನ್ನು ಉತ್ಪಾದಿಸುವ ಉದ್ಯಮವನ್ನು ನಡೆಸುವ ಕನಸನ್ನು ಹೊಂದಿದ್ದೇನೆ.
-ಸ್ವಸ್ತಿಕ್ ಪದ್ಮ
ಯುವ ವಿಜ್ಞಾನಿ ಪುರಸ್ಕೃತ
—–
ಪ್ರತಿಭೆಗಳಿಗೆ ಅವಕಾಶ
ವಿವೇಕಾನಂದ ವಿದ್ಯಾ ಸಂಸ್ಥೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನೇಕ ರೀತಿಯ ಅವಕಾಶ ಒದಗಿಸುತ್ತಿದೆ. ಅದೇ ರೀತಿಯಾಗಿ ಸ್ವಸ್ತಿಕ್ ಪದ್ಮನಂತಹ ಬಾಲ ಪ್ರತಿಭೆಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದರ ಜತೆಗೆ ಅವರ ಈ ಸಂಶೋಧನ ಪ್ರವೃತ್ತಿ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಆವಿಷ್ಕಾರ, ಸಂಶೋಧನೆಗೆ ಕಾಲೇಜು ಸದಾ ಸ್ಫೂರ್ತಿ ನೀಡುತ್ತದೆ.
-ಟಿ.ಎಸ್. ಸುಬ್ರಹ್ಮಣ್ಯ ಭಟ್
ನಿರ್ದೇಶಕರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು.