ಬೆಂಗಳೂರು: ಪತಿ ಮೇಲೆ ಪತ್ನಿಯೇ ಆ್ಯಸಿಡ್ ದಾಳಿ ನಡೆಸಿರುವ ಘಟನೆ ತಿಲಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಏಪ್ರಿಲ್ 26 ರಂದು ಘಟನೆ ನಡೆದಿದ್ದು, ಮೊಹಮದ್ ಅತೀಮ್ ಎಂಬುವರ ಮುಖಕ್ಕೆ ಆತನ ಪತ್ನಿ ಅಕ್ಸಾಪರ್ವಿನ್ ಆ್ಯಸಿಡ್ ಎರಚಿದ್ದಾರೆ. ಅತೀಮ್-ಅಕ್ಸಾಪರ್ವಿನ್ 2006 ಆಗಸ್ಟ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಅತೀಮ್ ಪತ್ನಿಗೆ ತಲಾಖ್ ನೀಡಿದ್ದ. ನಂತರ ಬೇರೊಂದು ಮದುವೆಯಾಗಲು ಯೋಚಿಸಿ, ಮ್ಯಾಟ್ರಿಮೊನಿಯಲ್ಲಿ ಪ್ರೋಫೈಲ್ ಫೊಸ್ಟ್ ಮಾಡಿದ್ದ.
ಈ ವಿಚಾರ ತಿಳಿದ ಪತ್ನಿ ಅಕ್ಸಾಪರ್ವಿನ್ ಕೋಪಗೊಂಡಿದ್ದಳು. ಇನ್ನು ತಲಾಖ್ ನೀಡಿದ್ರೂ ಅತೀಮ್ ಆಗಾಗ ಮಕ್ಕಳನ್ನ ನೋಡಲು ಪರ್ವಿನ್ ಮನೆಗೆ ಬರುತ್ತಿದ್ದ. ಹೀಗೆ ಕಳೆದ 26 ರಂದು ಮಕ್ಕಳನ್ನು ನೋಡಲು ಅಕ್ಸಾಪರ್ವಿನ್ ಮನೆಗೆ ಬಂದಿದ್ದ. ಈ ವೇಳೆ ಅತೀಮ್‍ಗೆ ಮ್ಯಾಟ್ರಿಮೋನಿಯಿಂದ ಯುವತಿಯ ಕರೆ ಬಂದಿದೆ. ಈ ವಿಚಾರವಾಗಿ ಅತೀಮ್ ಹಾಗೂ ಅಕ್ಸಾಪರ್ವಿನ್ ನಡುವೆ ಜಗಳವಾಗಿದೆ. ಬಳಿಕ ಆಕೆ ಮನೆಯಲ್ಲೇ ಊಟ ಮಾಡಿದ ಪತಿ ನಿದ್ರೆಗೆ ಜಾರುತ್ತಾನೆ. ಈ ವೇಳೆ ಅಕ್ಸಾಪರ್ವಿನ್ ಅತೀಮ್ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾಳೆ.
ಪರಿಣಾಮ ಅತೀಮ್ ಹಣೆ ಹಾಗೂ ಮುಖದ ಭಾಗಕ್ಕೆ ಸುಟ್ಟಗಾಯವಾಗಿದೆ. ಬಳಿಕ ಆತನನ್ನ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ಸಾಪರ್ವಿನ್‍ರನ್ನ ಬಂಧಿಸಲಾಗಿದೆ.