ಜೈಪುರ್: ವೋಟ್ ಮಾಡಿ ಎಂದು ಚುನಾವಣಾ ಆಯೋಗ ಎಷ್ಟೋ ಹಣ ಖರ್ಚು ಮಾಡಿ ಜಾಗೃತಿ ಮೂಡಿಸುತ್ತದೆ. ಇಂತಹ ಜಾಗೃತಿಯಿಂದ ಈ ಬಾರಿ ತಮ್ಮ ಹಕ್ಕು ಚಲಾಯಿಸಲು ಭಾರತೀಯರು ವಿದೇಶದಿಂದಲೂ ಆಗಮಿಸಿ ವೋಟ್ ಮಾಡಿ ಸಾರ್ಥಕತೆ ಮರೆದಿದ್ದರು. ಇದೇ ರೀತಿ ರಾಜಸ್ಥಾನದಲ್ಲೊಬ್ಬರು ಡಾಕ್ಟರ್ ಮತದಾನ ಜಾಗೃತಿ ಮೂಡಿಸಲು ಬರೊಬ್ಬರಿ 80 ಕಿಲೋ ಮೀಟರ್ ಸೈಕಲ್ ಜಾಥಾ ಮಾಡಿ ವೋಟ್ ಮಾಡಿದ್ದಾರೆ.
ಜೈಪುರದಲ್ಲಿ ನೆಲೆಸಿರುವ 52 ವರ್ಷದ ಜಿ.ಎಲ್.ಶರ್ಮಾ ಎಸ್‍ಎಂಎಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೃದ್ರೋಗ ವೈದ್ಯರಾಗಿದ್ದಾರೆ. ಟೊಂಕ್-ಸವೈಮಧೊಪುರ್ ಲೋಕಸಭಾ ಕ್ಷೇತ್ರದ ಸೋಡಾ ಗ್ರಾಮದಲ್ಲಿ ಹುಟ್ಟಿ ಬೆಳೆದ ಶರ್ಮಾರ ವೋಟಿಂಗ್ ಹಕ್ಕು, ಅವರ ಗ್ರಾಮದಲ್ಲೇ ಇದೆ. ಹೀಗಾಗಿ ಜೈಪುರದಿಂದ ತಮ್ಮ ಹುಟ್ಟೂರಿಗೆ ಬಂದು ವೋಟ್ ಮಾಡಲು ಶರ್ಮಾ ಬೆಳಗ್ಗೆ 4 ಗಂಟೆಗೆ ಸೈಕಲ್ ಹತ್ತಿದವರು 80 ಕಿಲೋ ಮೀಟರ್ ದೂರದ ತಮ್ಮ ಗ್ರಾಮವನ್ನ ಸಂಜೆ ಹೊತ್ತಿಗೆ ತಲುಪಿ ಹಕ್ಕು ಚಲಾಯಿಸಿದ್ದಾರೆ.
ಇವರು ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 3 ಬಾರಿ ಇದೇ ರೀತಿ ಸೈಕಲ್ ಜಾಥಾದಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ವೋಟ್ ಮಾಡಿದ್ದಾರಂತೆ. ಶರ್ಮಾ ಹೃದ್ರೋಗ ವೈದ್ಯರಾಗಿದ್ದರಿಂದ ಸೈಕಲ್ ತುಳಿದರೆ ಹೃದಯಕ್ಕೆ ಒಳ್ಳೆಯದು. ಹೃದಯ ಸಂಬಂಧ ಕಾಯಿಲೆಗಳಿದ್ದರೆ ದಯವಿಟ್ಟು ಸೈಕಲ್ ಓಡಿಸಿ, ಆದಷ್ಟು ಗುಣಮುಖವಾಗುತ್ತದೆ. ಇದು ಹೃದಯಕ್ಕೆ ತುಂಬಾ ಒಳ್ಳೆಯ ವ್ಯಾಯಾಮ. ಬಾಡಿ ಕೂಡ ಫಿಟ್ ಆಗಿರುತ್ತದೆ ಎಂದು ಹೇಳುತ್ತಾರೆ. .