ಉಪ್ಪಿನಂಗಡಿ: ಮನೆ, ಕುಟುಂಬದೊಳಗೆ ಸಂಕಷ್ಟಗಳು ಎದುರಾದಾಗ ನಂಬುವ ದೇವ, ದೈವಗಳ ಮೊರೆ ಹೋಗುವುದು ಅದಕ್ಕಾಗಿ ಪರಿಹಾರ ಕಂಡು ಕೊಳ್ಳುವುದು ಸಹಜ. ಆದರೆ ಇಲ್ಲಿ ಗ್ರಾಮ ವ್ಯಾಪ್ತಿಯೊಳಗೆ ಆಗಾg ಅಸಹಜ ಸಾವು, ಊರ ಬೀದಿಯಲ್ಲಿ ವಿಲಕ್ಷಣ ರೀತಿಯಲ್ಲಿ ಮೃತ ನಾಗರ ಹಾವು ಕಾಣಿಸಿಕೊಳ್ಳುವುದರಿಂದ ವಿಚಲಿತರಾದ ಗ್ರಾಮಸ್ಥರು ಒಗ್ಗೂಡಿ ಅಷ್ಟ ಮಂಗಲ ಪ್ರಶ್ನೆಯ ಮೊರೆ ಹೋಗಿ, ಆ ಮೂಲಕ ಗ್ರಾಮದೊಳಗೆ 500 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ದೈವ ಸ್ಥಾನವೊಂದು ಕಾಡಿನೊಳಗೆ ಅಜೀರ್ಣ ಸ್ಥಿತಿಯಲ್ಲಿ ಬೆಳಕಿಗೆ ಬಂದ ಘಟನೆ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಎಂಬಲ್ಲಿ ನಡೆದಿದೆ.
ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಪ್ರದೇಶದ ಜನರಲ್ಲಿ ಕಳೆದ ಕೆಲ ವರ್ಷಗಳಿಂದ ಜೀವಕಳೆ ಕಳೆದು ಹೋಗಿತ್ತು. ಅಲ್ಲಲ್ಲಿ ನಡೆಯುತ್ತಿದ್ದ ಅಸಹಜ ಸಾವು, ನೋವು, ರೋಗ, ರುಜಿನಗಳು. ಅದೇ ರೀತಿಯಲ್ಲಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಮೃತ ನಾಗರ ಹಾವುಗಳ ಪ್ರಕರಣಗಳಿಂದಾಗಿ ಕಳವಳಗೊಂಡ ಗ್ರಾಮಸ್ಥರು ಒಗ್ಗೂಡಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗುತ್ತಾರೆ. ಆ ಬಳಿಕ ನಡೆದುದು ಎಲ್ಲವೂ, ವಿಸ್ಮಯವಾದುದು.
ಅಷ್ಟಮಂಗಲ ಪ್ರಶ್ನೆಯ ಮೊರೆ ಹೋದ ಗ್ರಾಮಸ್ಥರು: ಗ್ರಾಮದಲ್ಲಿ ಸಂಕಷ್ಠಗಳ ಮೇಲೆ ಸಂಕಷ್ಟ ಎದುರಾಗುತ್ತಿದ್ದಂತೆ ಗ್ರಾಮಸ್ಥರು ಒಗ್ಗೂಡಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗುತ್ತಾರೆ. ಅಷ್ಠಮಂಗಲ ಪ್ರಶ್ನೆ ಇರಿಸಿದ ಖ್ಯಾತ ಜ್ಯೋತಿಷಿ ಕೆ.ವಿ. ಗಣೇಶ್ ಭಟ್ ಮುಳಿಯ ಗ್ರಾಮದಲ್ಲಿ ಅದ್ಧೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಅದಕ್ಕೆ ಸಂಬಂಧಿಸಿದ ಭಂಡಾರದ ಮನೆಯೂ ನೆಲ ಸಮವಾಗಿ ಅದರಲ್ಲಿದ್ದ ದೈವದ ಮೂರ್ತಿಗಳೂ ಕೂಡಾ ಮಣ್ಣಿನಡಿ ಸೇರಿ ಕೊಂಡಿದೆ. ಈ ದೈವಸ್ಥಾನದ ಪುನರುತ್ಥಾನವೇ ಗ್ರಾಮದ ಪುನರುತ್ಥಾನಕ್ಕೆ ಕಾರಣವಾಗಬಲ್ಲದು ಎಂದು ತಿಳಿಸಿದ್ದರು.
ಪ್ರಶ್ನೆಯಲ್ಲಿ ತಿಳಿದು ಬಂದಂತೆ, ತಿಳಿಸಿದಂತೆ ನಿರ್ದಿಷ್ಠ ಪ್ರದೇಶದ ಕಾಡಿನಲ್ಲಿ ತಪಾಸಣೆ ನಡೆಸಿದಾಗ ಮರ ಗಿಡಗಳು ಬೆಳೆದಿರುವ ಸ್ಥಿತಿಯಲ್ಲಿ ದೈವ ಸ್ಥಾನದ ಕಟ್ಟಡದ ಪಳೆಯುಳಿಕೆಗಳು ಕಂಡು ಬಂದಿತ್ತು. ಪಿಲಿಚಾಮುಂಡಿ, ಕೊರತ್ತಿ ಹಾಗೂ ಉಳ್ಳಾಕ್ಲು ದೈವದ ಮೂರು ಗುಡಿಗಳು ಕಾಲಾಂತರದಲ್ಲಿ ಶಿಥಿಲಗೊಂಡು ಕೇವಲ ಗುಡಿಯ ಪಂಚಾಂಗ ಮಾತ್ರ ಮರಗಿಡಗಳ ಮಧ್ಯೆ ಗೋಚರಿಸುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ದೈವಸ್ಥಾನದ ಭಂಡಾರದ ಮನೆ ಎಲ್ಲಿದೆ ಎಂಬ ಬಗ್ಗೆ ಎಲ್ಲರಲ್ಲೂ ಮೂಡಿದ್ದ ಸಂಶಯ ಸಂದೇಹಗಳನ್ನು ಪವಾಡ ಎಂಬಂತೆ ಬಗೆಹರಿಸಿದ ಜ್ಯೋತಿಷಿಯವರು, ಸ್ಥಳಪ್ರಶ್ನೆಯಲ್ಲಿ ಗೋಚರಿಸಿದಂತೆಯೇ ಪೆರ್ನೆ ಗ್ರಾಮದ ಅತ್ತಜಾಲು ಎಂಬಲ್ಲಿ ನಾಮಾವಶೇಷಗೊಂಡಿದ್ದ ಮನೆಯೊಂದರ ಪ್ರದೇಶದಲ್ಲಿ ಅಗೆತವನ್ನು ಮಾಡಲು ನಿರ್ದೇಶಿಸುತ್ತಾರೆ. ನಿರ್ದಿಷ್ಠ ದಿಕ್ಕಿನಲ್ಲಿ ನಡೆಸಿದ ಅಗೆತದ ವೇಳೆ ಮೂರು ದೈವಗಳ ಮೊಗ (ಮೂರ್ತಿಗಳು) ದೀಪ, ಗಂಟೆ, ಇತರ ದೈವಾರಾಧನೆಯ ಪರಿಕರಗಳು ಲಭಿಸುವ ಮೂಲಕ ಗ್ರಾಮಸ್ಥರಲ್ಲಿ ಕಾಡಿದ ವಿಸ್ಮಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
13 ನಾಗರ ಹಾವು ಸಾವು ಪ್ರಕರಣದ ಬಳಿಕ ನಾವುಗಳು ಒಗ್ಗೂಡಿದೆವು
ಗ್ರಾಮದಲ್ಲಿ ಅಸಹಸಜ ಸಾವು, ನೋವುಗಳು ಹೆಚ್ಚುತ್ತಿದ್ದಂತೆ, 13 ನಾಗರ ಹಾವು ಸಾವು ಪ್ರಕರಣ ನಡೆಯಿತು. ಆ ಬಳಿಕ ಗ್ರಾಮಸ್ಥರು ಒಗ್ಗೂಡಿ ಅಷ್ಟಮಂಗಳ ಪ್ರಶ್ನೆಯ ಮೊರೆ ಹೋದೆವು. ಆ ಬಳಿಕ ನಡೆದುದೆಲ್ಲವೂ ವಿಸ್ಮಯವಾಗಿದೆ. ಗ್ರಾಮದ ಹಿತಕ್ಕಾಗಿ ದೈವಸ್ಥಾನದ ಜೀರ್ಣೋದ್ದಾರ ನಡೆಸಲು ಊರವರು ಸಮಿತಿಯೊಂದನ್ನು ರಚಿಸಿದ್ದು, ಸ್ಥಳದಲ್ಲಿದ್ದ ಮೂರೂ ದೈವಗಳ ಗುಡಿಯನ್ನು ಗತ ಕಾಲದ ವಿಧಿ ವಿಧಾನದಂತೆಯೇ ಪುನರುಜ್ಜೀವನಗೊಳಿಸುವ ಸಂಕಲ್ಪವನ್ನು ತಾಳಿ ಅನುಜ್ಞಾ ಕಲಶ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ದೈವದ ಗುಡಿಗಳಿದ್ದ ಭೂಮಿಯನ್ನು ದೈವಸ್ಥಾನಕ್ಕೆ ಬಿಟ್ಟು ಕೊಡುವ ಬಗ್ಗೆ ಭೂಮಿಯ ಭೂಮಾಲಕರಾದ ದಯಾನಂದ ಪೂಜಾರಿ ಮಾಡತ್ತಾರು ಒಪ್ಪಿಗೆ ನೀಡಿ ತನ್ನ ದೈವ ನಂಬಿಕೆಯನ್ನು ಸಾಕ್ಷಿಕರಿಸಿದ್ದಾರೆ.
ಅದೇ ರೀತಿಯಾಗಿ ಭಂಡಾರದ ಮನೆಯನ್ನೂ ಪುನರ್ನಿರ್ಮಿಸಲು ಸಂಕಲ್ಪ ಮಾಡಿದ್ದು, ಇದೇ ವೇಳೆ ಭಂಡಾರದ ಮನೆಯ ನಿರ್ವಹಣೆಗಾಗಿ ಈ ಮೊದಲು ಇದ್ದಂತೆ ಜನ ವಾಸ್ತವ್ಯದ ಮನೆಯನ್ನೂ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ ತೊರೆದಿದ್ದ ಆನಂದ ಶೆಟ್ಟಿಯವರು ಪುನರ್ನಿರ್ಮಿತ ಮನೆಗೆ ಹಿಂತಿರುಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಈಶ್ವರ ಪ್ರಸನ್ನ ಮತ್ತು ಅಧ್ಯಕ್ಷ ಕಿರಣ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಗೆ ಮಾಹಿತಿ ನೀಡಿದರು.
ಕರಾಳ ಇತಿಹಾಸಕ್ಕೆ ಸಿಲುಕಿದ ಮನೆಯ ಕಥೆ-ವ್ಯಥೆ ಇದು..!!
ದೈವದ ಭಂಡಾರದ ಮನೆ ಗೋಚರಿಸಿದ ಸ್ಥಳದಲ್ಲಿ ನಿರ್ನಾಮಗೊಂಡ ಮನೆಯ ಇತಿಹಾಸವನ್ನು ಕೆದಕಿದಾಗ ಅದೊಂದು ಕರಾಳ ಇತಿಹಾಸಕ್ಕೆ ಸಿಲುಕಿ ಅಳಿದುಳಿದ ಒಬ್ಬ ವ್ಯಕ್ತಿ ಮನೆಯನ್ನು ತೊರೆದು ಹೋದ ವಿದ್ಯಮಾನವೂ ಇಲ್ಲಿ ಬೆಳಕಿಗೆ ಬಂದಿದೆ. ಮನೆಯ ಬೆಳಕಾಗಿದ್ದ ಮನೆ ಮಕ್ಕಳು ಒಟ್ಟಿಗೆ ಮೂವರು ಅಪಮೃತ್ಯುವಿಗೆ ಸಿಲುಕಿ, ಮನೆ ಮಾತೆ ಮತಿವಿಕಲತೆಗೆ ತುತ್ತಾಗಿ ಮನೆಯಲ್ಲಿ ನೆಮ್ಮದಿಯೇ ಕಾಣದಿದ್ದಾಗ ಕಂಗೆಟ್ಟ ಮನೆಯ ಅಳಿದುಳಿದ ಏಕೈಕ ವ್ಯಕ್ತಿ ಆನಂದ ಶೆಟ್ಟಿ ಎಂಬವರು ತನ್ನ ಪಾಲಿನ ಆಸ್ತಿಪಾಸ್ತಿಯನ್ನು ತೊರೆದು ದೂರದ ಕೆದಿಲಕ್ಕೆ ವಲಸೆ ಹೋಗುತ್ತಾರೆ.
ಅವರಿಗೆ ತನ್ನ ಗತಕಾಲದ ಚೌಕಿ ಮನೆಯಲ್ಲಿ ಭಂಡಾರದ ಮನೆಯೊಂದು ಇರುವುದು ತಿಳಿದಿತ್ತಾದರೂ ಅದು ಎಲ್ಲಿಯ ದೈವಸ್ಥಾನಕ್ಕೆ ಸೇರಿದೆ ಎನ್ನುವುದು ತಿಳಿದಿರಲಿಲ್ಲ. ಅದೇ ಭಂಡಾರದ ಮನೆಯಲ್ಲಿ ಇನ್ನೊಂದು ತೂಗು ಮಂಚವನ್ನು ಮಾಡಿಕೊಂಡು ತನ್ನ ಮನೆ ದೈವದ ಭಂಡಾರವನ್ನಿರಿಸಿ ಪೂಜಾ ಕಾರ್ಯವನ್ನು ಮಾಡುತ್ತಿದ್ದರು. ಯಾವಾಗ ಮನೆಯಲ್ಲಿ ಅಪಮೃತ್ಯುಗಳು ಸಂಭವಿಸತೊಡಗಿತ್ತೋ ಅಲ್ಲಿಂದ ಅವರಿಗೆ ಮನೆಯ ಮೇಲೆಯೇ ನಿರಾಸಕ್ತಿ ಮೂಡಿ ಅಲ್ಲಿಂದ ನಿರ್ಗಮಿಸಿದ್ದರು. ಬಳಿಕದ ದಿನಗಳಲ್ಲಿ ಮನೆ ಪತನವನ್ನು ಕಂಡಿತ್ತು.
ಏನೇ ಇರಲಿ ಕಾಲ ಅದೆಷ್ಟೇ ಆಧುನಿಕತೆಯ ಮೆರುಗಿನಲ್ಲಿ ಕಂಗೊಳಿಸಿದರೂ ಈ ಮಣ್ಣಿನಲ್ಲಿ ನೆಲೆನಿಂತ ದೈವ ದೇವರುಗಳ ಶಕ್ತಿ ಮಾತ್ರ ಸೊರಗದೆ-ಕರಗದೆ ಕಾಲಕಾಲಕ್ಕೆ ಪ್ರಭಾವ ತೋರಿಸುತ್ತಿರುವುದು ಮಾತ್ರ ಸತ್ಯವೂ ಹೌದು, ನಂಬಲರ್ಹವೂ ಹೌದು ಎನ್ನುತ್ತಾರೆ ಸಮಿತಿ ಗೌರವಾಧ್ಯಕ್ಷ ಈಶ್ವರ ಪ್ರಸನ್ನರವರು.