Monday, January 20, 2025
ಸುದ್ದಿ

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: ಹುತಾತ್ಮಗೊಂಡ ಭದ್ರತಾ ಪಡೆಯ 16 ಯೋಧರು – ಕಹಳೆ ನ್ಯೂಸ್

ಮುಂಬೈ: ಚುನಾವಣಾ ಸಂದರ್ಭದಲ್ಲಿ ನಕ್ಸಲರು ಅಟ್ಟಹಾಸ ಮುಂದುವರಿಸಿದ್ದಾರೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಂತೆಯೇ ನಕ್ಸಲರು ನಡೆಸಿದ ಭೀಕರ ದಾಳಿಗೆ 16 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭದ್ರತಾ ಪಡೆಯ ಕಮಾಂಡೋಗಳಿದ್ದ ಪೊಲೀಸರ ವಾಹನವನ್ನು ಸುಧಾರಿತ ಸ್ಪೋಟಕ ಸಾಧನದಿಂದ (ಐಇಡಿ) ಸ್ಪೋಟಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ ವಾಹನದ ಚಾಲಕ ಸಹ ಮೃತಪಟ್ಟಿದ್ದಾರೆ. ಕುರ್ಖೇಡಾದಿಂದ ಕ್ಷಿಪ್ರ ಕಾರ್ಯಾಚರಣಾ ತಂಡದ 16 ಭದ್ರತಾ ಸಿಬ್ಬಂದಿಯನ್ನು ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಜಂಬೋರ್ಖೇಡಾ ಮತ್ತು ಲೆಂಧಾರಿ ನಡುವೆ ನಕ್ಸಲರು ವಾಹನವನ್ನು ಸ್ಪೋಟಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ನಕ್ಸಲರು ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ 27 ಯಂತ್ರಗಳಿಗೆ ಮತ್ತು 30 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಳೆದ 18 ದಿನಗಳಲ್ಲಿ 25 ಯೋಧರು ಬಲಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ‘ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಮ್ಮ ಭದ್ರತಾ ಸಿಬ್ಬಂದಿ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಎಲ್ಲ ಧೈರ್ಯಶಾಲಿ ಯೋಧರಿಗೆ ನಮನಗಳು. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ಹುತಾತ್ಮ ಯೋಧರ ಕುಟುಂಬಕ್ಕೆ ನನ್ನ ಸಂತಾಪಗಳು. ಇಂತಹ ಹಿಂಸಾಚಾರ ನಡೆಸಿದ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿಯಲ್ಲಿ ಮೃತಪಟ್ಟ ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸಂತಾಪ ಸೂಚಿಸಿದ್ದಾರೆ. ಗಡ್ಚಿರೋಲಿಯಲ್ಲಿ ಸಿ-60 ಪಡೆಯ ನಮ್ಮ 16 ಸಿಬ್ಬಂದಿ ನಕ್ಸಲರ ಹೇಡಿತನದ ಕೃತ್ಯಕ್ಕೆ ಹುತಾತ್ಮರಾಗಿರುವುದು ತಿಳಿದು ನೋವಾಗಿದೆ. ಡಿಜಿಪಿ ಮತ್ತು ಗಡ್ಚಿರೋಲಿ ಎಸ್‍ಪಿ ಜತೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.