ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಉಡುಪಿಗೆ ಆಗಮಿಸಿದ್ದು ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಬಿಡುವಿಲ್ಲದೆ ಪ್ರಚಾರ ಮಾಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಗಮಿಸಿದ್ದರು.
5 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದ ಸಿಎಂ, ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಶತ್ರು ಸಂಹಾರ, ಯಶಸ್ಸು ಮತ್ತು ಶ್ರೇಯಸ್ಸಿಗಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಇದರೊಂದಿಗೆ ಕೊಪ್ಪ ತಾಲೂಕಿನ ಕಮ್ಮರಡಿ ಬಳಿ ಇರುವ ಕುಡ್ನಳ್ಳಿ ಉಮಾಮಹೇಶ್ವರ ದೇವಾಲಯದಲ್ಲಿ ಅಮಾವಾಸ್ಯೆ ಪೂಜೆ ನೆರವೇರಿಸಲಾಗುವುದು. ಉಮಾಮಹೇಶ್ವರಿ ದೇವಾಲಯದಲ್ಲಿ ಹೋಮ ಹವನ ನಡೆಯಲಿದ್ದು, ಇಂದು ಸಂಜೆ ಕೊಪ್ಪಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದಾರೆ.
ಜೆಡಿಎಸ್ ಕಾರ್ಯಕರ್ತ ರಂಗನಾಥ್‍ಗೆ ಸೇರಿದ ತಲವಾನೆ ಎಸ್ಟೇಟ್‍ನಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ವಿಶೇಷ ಪೂಜೆ, ಹೋಮ ಹವನಕ್ಕೆ ಸಂಕಲ್ಪ ಮಾಡಿದ್ದು, ಸಿಎಂ ಕುಟುಂಬದಿಂದ ರುದ್ರ ಹೋಮ ಗಣಪತಿ ಹೋಮ ನಡೆಸಲಾಗುವುದು. ನಾಳೆ ಪೂರ್ಣಾಹುತಿಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ.