ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 15 ಮಂದಿ ಪೊಲೀಸರು ಹಾಗೂ ವಾಹನ ಚಾಲಕ ಬುಧವಾರ ರಾತ್ರಿ ನಕ್ಸಲರು ಸ್ಫೋಟಿಸಿದ ಇಐಡಿಗೆ ಬಲಿಯಾಗಿದ್ದರು. ಘಟನೆ ಹಿನ್ನೆಲೆಯಲ್ಲಿ ಹುತಾತ್ಮರ ಗೌರವಾರ್ಥ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗಿತ್ತು.
ಭೀಕರ ನಕ್ಸಲ್ ದಾಳಿಗೆ ಬಲಿಯಾದ ಪೊಲೀಸ್ ತಂಡ ತಮ್ಮ ಚಲನೆಯನ್ನು ಯೋಜಿಸುವಾಗ ನಿಗದಿತ ಕಾರ್ಯಾಚರಣೆ ವಿಧಾನ ನಿರ್ಲಕ್ಷಿಸಿರುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಈ ಮಧ್ಯೆ ಪೊಲೀಸ್ ಪಡೆಯಿಂದ ಯಾವುದೇ ಲೋಪ ಆಗಿತ್ತೇ ಎಂಬ ಬಗ್ಗೆ ಡಿಜಿಪಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.
ಸಿಆರ್‌ಪಿಎಫ್ ಸಿಬ್ಬಂದಿಯನ್ನು ಪುರಾದಾ ಪ್ರದೇಶದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ತ್ವರಿತ ಸ್ಪಂದನೆ ತಂಡವನ್ನು ಕರೆಸಲಾಗಿತ್ತು ಎಂದು ತಿಳಿದುಬಂದಿದೆ.