ಚೆನೈ: ದೇಶದ ಕರಾವಳಿ ಭಾಗಗಳಿಗೆ ಫನಿ ಚಂಡಮಾರುತದ ಭೀತಿ ಎದುರಾಗಿದೆ. ಚಂಡಮಾರುತ ಅತ್ಯಂತ ಭೀಕರ ಸ್ವರೂಪದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಕಡೆಗಳಲ್ಲಿ ಫನಿ ಸೈಕ್ಲೋನ್ ಅಬ್ಬರಿಸಲು ಸಿದ್ಧವಾಗಿದೆ. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಒಡಿಶಾಗೆ ಬಂದು ಅಪ್ಪಳಿಸಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
ಒಡಿಶಾ :ನಗರದ ಪುರಿ, ಹಾಗೂ ಜಗತ್ ಸಿಂಗ್‍ಪುರ್ ಹಾಗೂ ಭುವನೇಶ್ವರದಲ್ಲೂ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಇದ್ದು, ಇದ್ರಿಂದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಒಡಿಶಾದ ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಪುರಿಯಲ್ಲಿ ಭೂ ಕುಸಿತ ಸಾಧ್ಯತೆ!
ಕಳೆದ 24 ಗಂಟೆಗಳಿಂದ ಜಿಲ್ಲೆಯ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ. ಈಗಾಗಲೇ 1 ದಶಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಒಡಿಶಾದ ಗಂಜಮ್ ಹಾಗೂ ಪುರಿ ಪ್ರದೇಶದ 3 ಲಕ್ಷ ಜನರನ್ನು ಆಶ್ರಯ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆಶ್ರಯ ತಾಣಗಳಲ್ಲಿ ಸುಮಾರು 5000 ಅಡುಗೆ ಮನೆಗಳು ಜನರಿಗೆ ಸೇವೆ ನೀಡಲಿವೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ. ಪುರಿ ಸಮೀಪದ ಬೀಚ್‍ನಲ್ಲಿ ಭೀಕರ ಗಾಳಿ ಬೀಸುತ್ತಿದೆ. ಈ ದೃಶ್ಯಗಳು ಫನಿ ಸೈಕ್ಲೋನ್ ಭೀಕರತೆಯನ್ನು ತೋರಿಸುತ್ತಿವೆ. ಒಡಿಶಾದ ಗಂಜಮ್ ಪ್ರದೇಶದಿಂದ 301460 ಜನರನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 541 ಗರ್ಭಿಣಿಯರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹೇಳಿದೆ.
ಪಶ್ಚಿಮ ಬಂಗಾಳ: ಕೋಲ್ಕತ್ತಾದ ಬಿಚಲಿ ಘಾಟ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಈಗಾಗ್ಲೇ ಮುಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲೂ ಫನಿ ಸೈಕ್ಲೋನ್ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಶ್ರೀಕುಕಲಂನಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಭಾರೀ ಗಾಳಿ ಬೀಸಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಕಾಲಿಂಗ ಪಟ್ಟಣಂ, ಭೀಮುನಿಪಟ್ಟಣಂ ಬಂದರುಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.