ನವದೆಹಲಿ: ಫಣಿ ಸೈಕ್ಲೋನ್ ಪರಿಣಾಮ ಒಡಿಶಾದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಬಿರುಗಾಳಿಯೊಂದಿಗೆ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆಯ ಹೊಡೆತಕ್ಕೆ ಭುವನೇಶ್ವರದಲ್ಲಿ ಹಲವಾರು ಮರಗಳು ಧರೆಗೆ ಉರುಳಿವೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ಶನಿವಾರ ಸಂಜೆ 6 ಗಂಟೆ ತನಕ ವಿಮಾನಗಳ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಬರಬೇಕಿದ್ದ ಎಲ್ಲಾ ವಿಮಾನಗಳ ಸಂಚಾರವನ್ನ ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ಒಟ್ಟು ಫಣಿ ಎಫೆಕ್ಟ್‍ಗೆ 83 ಪ್ಯಾಸೇಂಜರ್ ರೈಲು ಸೇರಿ ಒಟ್ಟು 140 ಟ್ರೈನ್‍ಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಒಡಿಶಾ ಸರ್ಕಾರ ಕಳೆದ 24 ಗಂಟೆಯಲ್ಲಿ 11 ಲಕ್ಷ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದೆ. ಒಡಿಶಾದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 5000 ಅಡುಗೆ ಮನೆ ನಿರ್ಮಿಸಿ ಫಣಿ ಸಂತ್ರಸ್ತರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಆರ್ಮಿ, ನೌಕಾಸೇನೆ, ಏರ್‍ಫೋರ್ಸ್, ಕೋಸ್ಟ್ ಗಾರ್ಡ್ ಮತ್ತು ರಾಷ್ಟ್ರೀಯ ವಿಪತ್ತುಪಡೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿದ್ದಾರೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಹಿರಿಯ ಅಧಿಕಾರಿಗಳಿಂದ ಫಣಿ ಚಂಡಮಾರುತದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.