ಧಾರವಾಡ: ಕಳೆದ ಮಾರ್ಚ್ ತಿಂಗಳಲ್ಲಿ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದು 19 ಮಂದಿ ಅಸುನೀಗಿದ ಘಟನೆ ನಂತರ ಪ್ರೇತ, ದೆವ್ವಗಳ ಕಥೆಗಳು ದುರಂತದ ಸ್ಥಳದಿಂದ ಹುಟ್ಟಿಕೊಳ್ಳಲಾರಂಭಿಸಿದೆ.
ಉಳಿದಿರುವ ಕಟ್ಟಡದ ಅಂಗಡಿಗಳು ಗ್ರಾಹಕರು ಪ್ರೇತ ಮತ್ತು ಇತರ ದುಷ್ಟ ಶಕ್ತಿಗಳು ಇರಬಹುದೆಂಬ ಭೀತಿಯಿಂದ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ಓಡಾಡಲೂ ಕೂಡ ಜನ ಹಿಂಜರಿಯುತ್ತಿದ್ದಾರೆ. ರಾತ್ರಿಯಾದ ಮೇಲಂತೂ ಹೊರಬರಲೇ ಭಯ. ದುರಂತ ನಡೆದ ಸ್ಥಳದಲ್ಲಿ ಕೆಟ್ಟ ಶಕ್ತಿಗಳು ಇದ್ದು ಯಾವ ದುರಂತ ಬೇಕಾದರೂ ನಡೆಯುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ಓಡಾಡದಂತೆ ಮನೆಯ ಹಿರಿಯ ಸದಸ್ಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. ಕಟ್ಟಡ ಕುಸಿದು ಬಿದ್ದ ನಂತರ ಈ ಸ್ಥಳದಲ್ಲಿ ಮಾನವ ಸಂಚಾರ ಕಡಿಮೆಯಾಗಿದೆ. ಘಟನೆ ನಡೆಯುವುದಕ್ಕೆ ಮುನ್ನ ಈ ಪ್ರದೇಶದಲ್ಲಿದ್ದ ರೆಸ್ಟೊರೆಂಟ್, ಮೆಡಿಕಲ್ ಸ್ಟೋರ್ ಮತ್ತು ಬೇರೆ ಮಳಿಗೆಗಳಲ್ಲಿ ಜನಸಂದಣಿ ದಟ್ಟವಾಗಿತ್ತು. ಇಂದು ಕಟ್ಟಡವಿಲ್ಲದಿರುವುದು ಅಲ್ಲಿನ ವಾತಾವರಣವನ್ನೇ ಸಂಪೂರ್ಣ ಬದಲಾಯಿಸಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.