ಭುವನೇಶ್ವರ: ಒಡಿಶಾ ಕರಾವಳಿಗೆ ಫನಿ ಚಂಡಮಾರುತ ಅಪ್ಪಳಿಸಿದ ಬೆನ್ನಿಗೇ ಭುವನೇಶ್ವರದಲ್ಲಿ ಜನಿಸಿದ ಮಗುವಿಗೆ ಅದೇ ಹೆಸರನ್ನು ಇಡಲಾಗಿದೆ. ಶುಕ್ರವಾರ ಬೆಳಿಗ್ಗೆ 11:03ಕ್ಕೆ ರೈಲ್ವೆ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 32ರ ಹರೆಯದ ಮಹಿಳೆ ಚಂಡಮಾರುತದ ನೆನಿಪಿಗಾಗಿ ‘ಫನಿ’ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದಾಳೆ.
ರೈಲ್ವೆ ಉದ್ಯೋಗಿಯಾಗಿರುವ ಮಹಿಳೆ ಮಂಚೇಶ್ವರದ ಬೋಗಿ ದುರಸ್ತಿ ಕಾರ್ಯಾಗಾರದಲ್ಲಿ ಸಹಾಯಕಿಯಾಗಿದ್ದಾರೆ. ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಹಿಂದೆ ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಜನಿಸಿದ್ದ ಹಲವಾರು ಮಕ್ಕಳು ಅವೇ ಹೆಸರುಗಳನ್ನು ಪಡೆದುಕೊಂಡಿವೆ. ಕಳೆದ ವರ್ಷ ತಿತ್ಲಿ ಚಂಡಮಾರುತ ಒಡಿಶಾದಲ್ಲಿ ಹಾವಳಿಯೆಬ್ಬಿಸಿದ್ದಾಗ ಹಲವಾರು ಪೋಷಕರು ತಮ್ಮ ನವಜಾತ ಪುತ್ರಿಯರಿಗೆ ‘ತಿತ್ಲಿ’ ಎಂದು ನಾಮಕರಣ ಮಾಡಿದ್ದರು.