ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಎ.ಎಸ್.ಪಿ.ಸೈದುಲ್ ಅಡಾವತ್: ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳ ವಶ – ಕಹಳೆ ನ್ಯೂಸ್
ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಎ.ಎಸ್.ಪಿ.ಸೈದುಲ್ ಅಡಾವತ್ ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡ ಘಟನೆ ಪುದು ಗ್ರಾಮದ ಸುಜೀರ್ ಎಂಬಲ್ಲಿ ನಡೆದಿದೆ. ಬಂಟ್ವಾಳ ಸುಜೀರ್ ಎಂಬಲ್ಲಿ ಹಿಟಾಚಿ ಮತ್ತು ಟಿಪ್ಪರ್‌ಗಳನ್ನು ಬಳಸಿ ನೇತ್ರಾವತಿ ನದಿಯ ಹಿನ್ನೀರಿನಿಂದ ಅಕ್ರಮವಾಗಿ ಮರಳು ತೆಗೆದು ಅದನ್ನು ಫಿಲ್ಟರ್ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಎ.ಎಸ್.ಪಿ. ತಂಡ ಕೋಟ್ಯಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದೆ.
ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ 3 ಟಿಪ್ಪರ್ ಲಾರಿಗಳು ಇದರ ಅಂದಾಜು ಮೌಲ್ಯ 24,00,000/, ಎಲ್&ಟಿ ಕಂಪೆನಿಯ ಒಂದು ಹಿಟಾಚಿ ಇದರ ಅಂದಾಜು ಮೌಲ್ಯ 55,00,000/, ಕೊಬೆಲ್ಕೋ ಕಂಪೆನಿಯ ಒಂದು ಹಿಟಾಚಿ, ಇದರ ಅಂದಾಜು ಮೌಲ್ಯ 80,00,000/-, ಒಂದು ಗ್ರೀನ್ ವಿಕ್ ಕಂಪೆನಿಯ ಜನರೇಟರ್ ಇದರ ಅಂದಾಜು ಮೌಲ್ಯ 6,00,000/-, ಮರಳು ಫಿಲ್ಟರ್ ಮಾಡುವ ಯುನಿಟ್ ಇದರ ಅಂದಾಜು ಮೌಲ್ಯ 80,000/-, 35 ಲೋಡ್ ಮರಳು ಇದರ ಅಂದಾಜು ಮೌಲ್ಯ 1,10,000/- ಗಳನ್ನು ವಶಕ್ಕೆ ಪಡೆದಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1 ಕೋಟಿ 65 ಲಕ್ಷ ಆಗಿರುತ್ತದೆ.
ದಾಳಿಯನ್ನು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸೈದುಲ್ ಅದಾವತ್ ರವರ ತಂಡ ನಡೆಸಿದ್ದು, ಬಂಟ್ವಾಳ ವೃತ್ತ ನಿರೀಕ್ಷಕರಾದ ಶರಣೆ ಗೌಡ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ. ಎಂ.ಎಸ್, ಸಿಬ್ಬಂದಿಗಳಾದ ಹನುಮಂತ, ಉಮೇಶ, ಕುಮಾರ್, ನಝೀರ್, ನಾಗನಾಥ್, ಅಜಿತ್ ಬಂಗೇರಾ, ಕಿರಣ್ ಪಾಲ್ಗೊಂಡಿರುತ್ತಾರೆ.