ಅಮರಾವತಿ: ಕರ್ನಾಟಕ ಮೂಲದ ದಂಪತಿಯ ಮಕ್ಕಳಿಬ್ಬರು ಹಸಿವು ತಾಳಲಾರದೆ ಮಣ್ಣು ತಿಂದು ಪೋಷಕಾಂಶಗಳ ಕೊರತೆಯಿಂದ ಮೃತಪಟ್ಟಿರುವ ಘಟನೆಯು ಇಲ್ಲಿ ನಡೆದಿದೆ.
ಮಕ್ಕಳನ್ನು ಸ್ಮಶಾನಕ್ಕೆ ಕೊಂಡುಹೋಗಿ ಅಂತ್ಯಕ್ರಿಯೆ ಮಾಡಲು ಹಣವಿಲ್ಲದೆ ಇದ್ದ ಕಾರಣ ತಾವು ವಾಸವಾಗಿದ್ದ ಗುಡಿಸಲಿನ ಬದಿಯಲ್ಲೇ ಮಕ್ಕಳಿಬ್ಬರನ್ನು ಮಣ್ಣು ಮಾಡಿದ್ದಾರೆ.
ಮೂರು ವರ್ಷದ ಸಂತೋಷ್ ಎಂಬ ಬಾಲಕ ಆರು ತಿಂಗಳ ಹಿಂದೆ ಮೃತಪಟ್ಟರೆ, ಆತನ ಸೋದರಿ ಎರಡು ವರ್ಷದ ವೆನ್ನೆಲಾ ಏಪ್ರಿಲ್ 28ರಂದು ಸಾವಿಗೀಡಾಗಿದ್ದಾರೆ.
ಚಿಕ್ಕಬಳ್ಳಾಪುರರಿಂದ ಆಂಧ್ರಕ್ಕೆ ವಲಸೆ ಹೋಗಿ ನೆಲೆಸಿರುವ ನಾಗಮಣಿ ಮತ್ತು ಮಹೇಶ್ ದಂಪತಿಯ ಮಕ್ಕಳು ಇವರಾಗಿದ್ದಾರೆ. ದಂಪತಿ ಬಳಿಯಲ್ಲಿ ಒಟ್ಟು ಆರು ಮಂದಿ ಮಕ್ಕಳಿದ್ದಾರೆ. ಆದರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ಹಾಗೂ ಮಕ್ಕಳ ಅಜ್ಜಿ ಸರಿಯಾಗಿ ಕುಡಿದು ಬಂದು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ ಮತ್ತು ಪ್ರತಿನಿತ್ಯ ಮಕ್ಕಳಿಗೆ ಊಟ ಕೂಡ ಕೊಡುತ್ತಿರಲಿಲ್ಲ ಎಂದು ಅಲ್ಲಿಗೆ ಭೇಟಿ ನೀಡಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಂಪತಿ ಬಳಿ ಆಧಾರ್ ಕಾರ್ಡ್ ಕೂಡ ಇಲ್ಲದೆ ಇದ್ದ ಕಾರಣದಿಂದಾಗಿ ಮಕ್ಕಳಿಗೆ ಅಂಗನವಾಡಿಯಲ್ಲಿ ಆಹಾರ ಕೂಡ ಸಿಗುತ್ತಿರಲಿಲ್ಲ ಎಂದು ಕದಿರಿ ಗ್ರಾಮೀಣ ವಲಯದ ಇನ್ಸ್ ಪೆಕ್ಟರ್ ಎ.ಇಸ್ಮಾಯಿಲ್ ಹೇಳಿದ್ದಾರೆ.