ಉತ್ತರಪ್ರದೇಶದ ಲಕ್ನೋ ದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಈ ವೇಳೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿಯವರ ಕುರಿತು ನಿಮ್ಮ ತಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬೋಫೋರ್ಸ್ ಹಗರಣ ನಡೆದಿತ್ತು. ಅವರು ದೊಡ್ಡ ಮಟ್ಟದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದು, ನಂಬರ್ ಒನ್ ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು ಎಂದು ಹೇಳಿದ್ದಾರೆ.
ಬೋಫೋರ್ಸ್ ಹಗರಣದಲ್ಲಿ ನ್ಯಾಯಾಲಯ ರಾಜೀವ್ ಗಾಂಧಿಯವರನ್ನು ಈಗಾಗಲೇ ಖುಲಾಸೆ ಮಾಡಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರ ಪ್ರಸ್ತಾಪಿಸಿರುವುದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಫೇಲ್ ಒಪ್ಪಂದದ ಕುರಿತು ರಾಹುಲ್ ಪದೇ ಪದೇ ಪ್ರಸ್ತಾಪಿಸುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಬೋಫೋರ್ಸ್ ಹಗರಣವನ್ನು ಕೆದಕಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಸಲಾಗುತ್ತಿದೆ.