ಮೊನ್ನೆಯಷ್ಟೇ ಅಗಾಧ ಸಾಮಥ್ರ್ಯದ ಶಸ್ತ್ರಾಸ್ತ್ರ ಪರೀಕ್ಷಿಸಿದ್ದ ಉತ್ತರ ಕೊರಿಯಾ ನಿನ್ನೆ ನಡೆದ ಸಮರ ತಾಲೀಮು ನಂತರ ರಾಕೆಟ್ ಮತ್ತು ಪ್ರತಿತಂತ್ರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳ ಪರೀಕ್ಷಾರ್ಥ ಪ್ರಯೋಗ ನಡೆಸಿತು. ಇನ್ನು ಇದನ್ನ ಅಧ್ಯಕ್ಷ ಕಿಮ್ ಖುದ್ದಾಗಿ ವೀಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಅಪಾಯಕಾರಿ ಶಸ್ತ್ರಾಸ್ತ್ರಗಳ ಪರೀಕ್ಷೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ.
ಅಮೆರಿಕ ಜೊತೆ ಅಣ್ವಸ್ತ್ರ ನಿಶಸ್ತ್ರೀಕರಣ ಮಾತುಕತೆಗೆ ಮತ್ತೊಂದು ಸುತ್ತಿನ ವೇದಿಕೆ ಸಜ್ಜಾಗುತ್ತಿರುವಾಗಲೇ ಉತ್ತರ ಕೊರಿಯಾದ ಈ ಕ್ರಮ ಮುಂದೇನು ಎಂಬ ಆಘಾತಕಾರಿ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಆಗಾಗ ವಿನಾಶಕಾರಿ ಕ್ಷಿಪಣಿಗಳು ಮತ್ತು ಅಣ್ವಸ್ತ್ರ ಸಾಮರ್ಥ್ಯ ದ ರಾಕೆಟ್ಗಳನ್ನು ಪರೀಕ್ಷಿಸಿ ಏಷ್ಯಾ ಖಂಡ ಮತ್ತು ಅಮೆರಿಕಕ್ಕೆ ತಲೆನೋವಾಗಿದ್ದ ಉತ್ತರ ಕೊರಿಯಾ, ನಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ತ್ಯಜಿಸುವುದಾಗಿ ಹೇಳಿತ್ತು.
ಈ ಸಂಬಂಧ ಸ್ಗಿಂಗಪುರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ನಡುವೆ ನಡೆದ ಮಹತ್ವದ ಶೃಂಗಸಭೆ ಫಲಪ್ರದವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದು, ಕೊರಿಯಾ ಮೇಲೆ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು.
ಈ ಭಿನ್ನಾಭಿಪ್ರಾಯಗಳ ನಡುವೆ ಇತ್ತೀಚೆಗೆ ವಿಯೆಟ್ನಾಂನಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆ ವೇಳೆ ಅಮೆರಿಕ ಅಧ್ಯಕ್ಷರು ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ತಮ್ಮ ನಿಲುವುಗಳಿಗೆ ಬದ್ಧರಾದ ಕಾರಣ ಸಂಧಾನ ಯತ್ನ ಮುರಿದು ಬಿದ್ದಿತು. ಈಗ ಮೂರನೇ ಸುತ್ತಿನ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಇದೇ ವೇಳೆ ಉತ್ತರ ಕೊರಿಯಾ ಪುನಃ ಮಾರಕ ಶಸ್ತ್ರಾಸ್ತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಆತಂಕ ಸೃಷ್ಟಿಸಿದೆ.