Recent Posts

Sunday, November 17, 2024
ಸುದ್ದಿ

ಫಿಲೋಮಿನಾ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ವಿದಾಯ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಸತತ ಅಭ್ಯಾಸವೇ ಮಾನವನ ಪರಿಪೂರ್ಣತೆಗೆ ಮೂಲಮಂತ್ರ. ಶಿಕ್ಷಕನಾದವನು ತನ್ನ ಪರಿಣಾಮಕಾರಿ ಅಧ್ಯಾಪನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಉಳ್ಳವನಾಗಿರಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಮೇ 3 ರಂದು ಗಣಿತಶಾಸ್ತ್ರ ವಿಷಯದಲ್ಲಿ ಎರಡು ವರ್ಷಗಳ ಎಂಎಸ್ಸಿ ಅಧ್ಯಯನ ಮುಗಿಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಅಯೋಜಿಸಲಾದ ವಿದಾಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ತರ್ಕ, ಸಂಗೀತ, ವ್ಯಾಕರಣ ಮತ್ತು ಗಣಿತಶಾಸ್ತ್ರ ವಿಷಯಗಳು ಪರಸ್ಪರ ಅನ್ಯೋನ್ಯವಾಗಿವೆ. ಒಬ್ಬ ಉತ್ತಮ ಶಿಕ್ಷಕನೆನಿಸಿಕೊಳ್ಳಬೇಕಾದರೆ ವ್ಯಾಕರಣಬದ್ಧ ಭಾಷಾ ಪಾಂಡಿತ್ಯವೂ ಬಹಳ ಅಗತ್ಯ. ಜ್ಞಾನ ಸಂಪತ್ತಿನೊಂದಿಗೆ ಹೃದಯ ಶ್ರೀಮಂತಿಕೆಯೂ ಮೇಳೈಸಿದಾಗ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಾಗ ಸಂಯೋಜಕ ಪ್ರೊ. ಗಣೇಶ್ ಭಟ್ ಮಾತನಾಡಿ, ಉತ್ತಮ ಪ್ರಶಸ್ತಿ ಪತ್ರಗಳು ಮತ್ತು ಅಂಕ ಪಟ್ಟಿಗಳ ಗಳಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಎರಡು ವರ್ಷಗಳ ಸ್ನಾತಕೋತ್ತರ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಧನಾತ್ಮಕ ಬದಲಾವಣೆಗಳು ಹೆಮ್ಮೆಯನ್ನುಂಟು ಮಾಡುವಂತದ್ದಾಗಿದೆ. ವೃತ್ತಿ ಬದುಕಿನಲ್ಲಿ ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಸುವಲ್ಲಿ ಕಂಕಣಬದ್ಧರಾಗುವುದರೊಂದಿಗೆ ಮಾತೃ ಸಂಸ್ಥೆಯ ಬಗ್ಗೆ ಹೃದಯಾಂತರಾಳದ ಅಭಿಮಾನವಿರಬೇಕು. ಸಮಾಜದಲ್ಲಿ ಉತ್ತಮ ಮಾನವರಾಗಲು ಸದಾ ಪ್ರಯತ್ನಿಸಿ ಎಂದು ಹೇಳಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ವೈಷ್ಣವಿ ಸಿ ಮಾತನಾಡಿ, ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸಿಂಹಾವಲೋಕನ ಮಾಡುವುದು ಬಹಳ ಮುಖ್ಯ. ನಾವು ಕೈಗೊಳ್ಳುವ ಯೋಜನೆಗಳು ವ್ಯಕ್ತಿಗತ ಪ್ರಗತಿ ಹಾಗೂ ಸಂಸ್ಥೆಯ ಏಳಿಗೆಗೆ ಪೂರಕವಾಗಿ ಸ್ಪಂದಿಸುವಂತಿರಬೇಕು. ನಾವು ಅಧ್ಯಯನ ಗೈಯುವ ವಿಷಯದ ಕುರಿತು ಪರಿಪೂರ್ಣ ಜ್ಞಾನವಿದ್ದಾಗ ವೃತ್ತಿ ಬದುಕಿನಲ್ಲಿ ಹಿಂಜರಿಕೆಯೆಂಬುದಿಲ್ಲ ಎಂದು ಹೇಳಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅನುಷಾ ಎಲ್, ಕಾರ್ತಿಕ್ ಕೆ, ಮೋಹನ್‍ರಾಜ್ ಎಸ್ ಮತ್ತು ವೃಕ್ಷವರ್ಧನ ಹೆಬ್ಬಾರ್ ಎನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಭಾಗವು ಹಮ್ಮಿಕೊಂಡ ಸರ್ಟಿಫಿಕೇಟ್ ಕೋರ್ಸನ್ನು ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಚೈತ್ರ, ದೀಪಶ್ರೀ ಮತ್ತು ಪಲ್ಲವಿ ಅನಿಸಿಕೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಾದ ಅನನ್ಯಲಕ್ಷ್ಮೀ ಮತ್ತು ತಂಡದವರು ಪ್ರಾರ್ಥಿಸಿದರು. ಲವಿಟ ರಮ್ಯ ಡಿ’ಸೋಜ ಸ್ವಾಗತಿಸಿ, ಪೂಜಾ ಕೆ ವಂದಿಸಿದರು. ಶ್ರುತಿ ಯು ಕಾರ್ಯಕ್ರಮ ನಿರೂಪಿಸಿದರು.