Monday, January 20, 2025
ಸುದ್ದಿ

ಫಿಲೋಮಿನಾ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ವಿದಾಯ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು: ಭಾರತೀಯ ಆಡಳಿತಾತ್ಮಕ ಸೇವೆಗೆ ನೇಮಕಾತಿ ಸಂದರ್ಭದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅರ್ಥಶಾಸ್ತ್ರದಂತಹ ಕಲಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯದ ಕುರಿತು ಪರಿಪೂರ್ಣ ಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಅಧ್ಯಯನವನ್ನು ಪೂರೈಸಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಮೇ 3ರಂದು ಪೀಜಿ ಸಭಾಂಗಣದಲ್ಲಿ ಆಯೋಜಿಸಲಾದ ವಿದಾಯ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನವನು ತನ್ನ ಸಾಮಥ್ರ್ಯದ ಕುರಿತು ಸ್ವವಿಮರ್ಶೆ ಮಾಡಿಕೊಳ್ಳುವ ಮನಃಸ್ಥಿತಿಯನ್ನು ಹೊಂದಿರಬೇಕು. ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ಕೇವಲ ಜ್ಞಾನ ಸಂಪಾದನೆಯೊಂದೇ ಸಾಲದು. ಉತ್ತಮ ನಡತೆ ಮತ್ತು ನೈತಿಕತೆಯೂ ವೃತ್ತಿ ಬದುಕಿನ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಭಾವನೆಗಳನ್ನು ಇತರರಿಗೆ ತಲುಪಿಸಲು ಪರಿಣಾಮಕಾರಿಯಾದ ಭಾಷಾ ಜ್ಞಾನವೂ ಅತಿ ಅಗತ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಭಾಗದ ಸಂಯೋಜಕ ಪ್ರೊ. ದಿನಕರ ರಾವ್ ಮಾತನಾಡಿ, ಶಿಕ್ಷಣ ಸಂಸ್ಥೆಯ ಏಳಿಗೆಯಲ್ಲಿ ಅಧ್ಯಯನಾಸಕ್ತ ವಿದ್ಯಾರ್ಥಿ ಸಮುದಾಯ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕ ವೃಂದ ನಿರ್ಣಾಯಕ ಪಾತ್ರ ವಹಿಸುತ್ತದೆ. ಜ್ಞಾನದ ಮಟ್ಟವನ್ನು ಉನ್ನತೀಕರಿಸುವ ಜೊತೆಯಲ್ಲಿ ಸ್ಪರ್ಧೆಯನ್ನು ಎದುರಿಸಲು ಅಗತ್ಯವಿರುವ ಸಾಮರ್ಥ್ಯ ವನ್ನೂ ವೃದ್ಧಿಸಿಕೊಳ್ಳಬೇಕು. ವೃತ್ತಿ ಬದುಕಿನಲ್ಲಿ ಸಂಸ್ಥೆಯ ಘನತೆ ಗೌರವವನ್ನು ಕಾಪಾಡುವಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಹೇಳಿ, ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಅರ್ಥಶಾಸ್ತ್ರದ ವಿದ್ಯಾರ್ಥಿಗಳು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರ ಸಾಧನೆಗಳನ್ನು ಅಧ್ಯಯನಕ್ಕೆ ಮಾದರಿಯಾಗಿ ಪರಿಗಣಿಸಬೇಕು. ಸಾರ್ಥಕತೆಗೆ ಸತತ ಪ್ರಯತ್ನವೇ ಮೂಲಮಂತ್ರ ಎಂಬ ಮಾತಿಗೆ ಮೈಸೂರು ಮೂಲದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಧರೆ ಡಾ. ಗೀತಾ ಗೋಪಿನಾಥ್ ಇವರು ಐಎಮ್‍ಎಫ್‍ನ ಸಂಶೋಧನಾ ವಿಭಾಗದಲ್ಲಿ ಪ್ರಧಾನ ಅರ್ಥಶಾಸ್ತ್ರಜ್ಞೆಯಾಗಿ ನೇಮಕಗೊಂಡಿರುವುದೇ ಸಾಕ್ಷಿ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿವೆ. ಇದನ್ನು ಬಳಸಿಕೊಳ್ಳಿಎಂದು ಹೇಳಿ, ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿನಿ ಶಬಾನ ಪಿ. ಇವರನ್ನು ಸನ್ಮಾನಿಸಲಾಯಿತು. ಸ್ಟೂಡೆಂಟ್-ಫೇಕಲ್ಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರುತಿ ಬಿ. ಎಸ್, ಅಶ್ವಿನಿ ಸಿ. ಎಸ್, ಬಿ. ಓ. ಸೌಮ್ಯ, ಶಬಾನ ಪಿ, ಅಕ್ಷತಾ ಎಸ್, ಪಲ್ಲವಿ ಇವರಿಗೆ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು. ಪ್ರೋಡಕ್ಟ್ ಲಾಂಚ್ ಸ್ಪರ್ಧೆಯ ವಿಜೇತರಾದ ಮೋಹಿನಿ(ಪ್ರ), ಶ್ರುತಿ ಬಿ. ಎಸ್(ದ್ವಿ), ಅಕ್ಷತಾ ಮತ್ತು ಬಿ. ಟಿ. ಸೌಮ್ಯ(ತೃ) ಇವರನ್ನು ಅಭಿನಂದಿಸಲಾಯಿತು. ಇಕೊನೊಮಿಕ್ಸ್ ಫೆಸ್ಟ್‍ನಲ್ಲಿ ಸಮಗ್ರವಾಗಿ ಸಹಕರಿಸಿದ ಪವಿತ್ರ ಜಿ ಹಾಗೂ ವಾಲ್ ಬೋರ್ಡ್ ಮ್ಯಾಗಸಿನ್ನನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಅಮೃತಾ, ಸರಸ್ವತಿ ಮತ್ತು ಸ್ವಾತಿ ಇವರನ್ನು ಗೌರವಿಸಲಾಯಿತು. ಸ್ಪೋಕನ್ ಇಂಗ್ಲಿಷ್ ಸರ್ಟಿಫಿಕೇಟ್ ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ. ಮಂಜುಳಾ ಬಿ. ಸಿ. ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಸಂಧ್ಯಾ ಎಚ್, ಪ್ರದೀಪ್ ಕೆ ಎಸ್ ಮತ್ತು ಮಹಿತಾ ಕುಮಾರಿ ಎಮ್ ಸಹಕರಿಸಿದರು.

ಶ್ವೇತಾ ಜಿ ಎಮ್ ಮತ್ತು ತಂಡದವರು ಪ್ರಾರ್ಥಿಸಿದರು. ಪವಿತ್ರ ಸ್ವಾಗತಿಸಿ, ಮಿಸ್ರಿಯಾ ವಂದಿಸಿದರು. ಶ್ವೇತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ಮನರಂಜನಾ ಸ್ಪರ್ಧೆಗಳನ್ನು ಸಂಯೋಜಿಸಿದರು.