ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶ ಬಯಸುವ ಅಭ್ಯರ್ಥಿಗಳ ಪ್ರವೇಶಕ್ಕೆ ನಿನ್ನೆ ನೀಟ್ ಪರೀಕ್ಷೆ ನಡೆದಿದೆ. ಆದ್ರೆ ಪರೀಕ್ಷೆಗೂ ಮುನ್ನ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಪರೀಕ್ಷೆ ವೇಳೆ ಗೊಂದಲಗಳನ್ನ ಸೃಷ್ಟಿ ಮಾಡಿದೆ. ಚುಣಾವಣಾ ಕಾರಣ ಕೊಟ್ಟು ಯಲಹಂಕದ ಪ್ರೆಸೆಡೆನ್ಸಿ ಕಾಲೇಜ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ ಹೊಸೂರು ರಸ್ತೆಯ ಕೂಡ್ಲುಗೇಟ್ ಬಳಿಯ ದಯಾನಂದ ಸಾಗರ್ ಕಾಲೇಜ್ ಸ್ಥಳಾಂತರ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪರದಾಡಿದರೆ, ಪೋಷಕರು, ಪೊಲೀಸರ ನಡುವೆ ವಾಗ್ವಾದವೇ ನಡೆದಿದೆ.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ರೈಲು ಕೈಕೊಟ್ಟಿದೆ. ಬಳ್ಳಾರಿಗೆ ರಾತ್ರಿ 8ಕ್ಕೆ ಬರಬೇಕಿದ್ದ ಹಂಪಿ ಎಕ್ಸ್ ಪ್ರೆಸ್ ರೈಲು, ಮಧ್ಯರಾತ್ರಿ 2 ಗಂಟೆಗೆ ಆಗಮಿಸಿ, ಬೆಂಗಳೂರಿಗೆ ಮಧ್ಯಾಹ್ನ 2.45ಕ್ಕೆ ಬಂದಿದೆ. ಚಿಕ್ಕಮಗಳೂರಿನ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನ ಮಿಸ್ ಮಾಡಿಕೊಂಡಿದ್ದಾರೆ.
ಈ ನಡುವೆ ವಿದ್ಯಾರ್ಥಿಗಳ ಪರದಾಟ ಕಂಡು ಸಿಎಂ ಕುಮಾರಸ್ವಮಿ ಅವರು ಈ ಬಗ್ಗೆ ಟ್ವಿಟ್ ಮಾಡಿ, ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮೋದಿಗೆ ತಿಳಿಸಿದ್ದಾರೆ.