ಕಲಬುರಗಿ : ರಾಜೀವ್‌ಗಾಂಧಿಯವರ ಕುರಿತು ಹೇಳಿಕೆ ನೀಡಿದ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಟೀಕಿಸಲಾರಂಭಿಸಿದ್ದು, ಸಾಮಾನ್ಯವಾಗಿ ವೈಯಕ್ತಿಕ ಟೀಕೆ ಹಾಗೂ ಸಂಸದೀಯ ಭಾಷೆ ಮೀರಿ ಮಾತನಾಡಿದ್ದರು ಆದರೆ ಇಂದು ಖರ್ಗೆ ಅವರೂ ಕೂಡ ಮೋದಿ ಕುರಿತು ವೈಯಕ್ತಿಕ ಟೀಕೆಗಿಳಿದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದ ನರೇಂದ್ರ ಮೋದಿಯವರಿಗೆ ಮನೆ ಸಂಸ್ಕಾರ ಇಲ್ಲ, ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬೋಫರ್ಸ್ ವಿವಾದವನ್ನು ೩೦ ವರ್ಷಗಳ ಹಿಂದೆಯೇ ಹೈಕೋರ್ಟ್ ವಜಾಗೊಳಿಸಿದೆ. ಆದರೂ ಚುನಾವಣೆ ವೇಳೆ ಮೋದಿ ಈ ವಿಷಯ ಚರ್ಚಿಸುತ್ತಿರುವುದು ಖಂಡನೀಯ. ಸುಳ್ಳು ಹೇಳುವುದೇ ಮೋದಿಯವರ ಹುಟ್ಟುಗುಣ. ದೇಶಕ್ಕಾಗಿ ಹುತಾತ್ಮರಾದ ರಾಜೀವ್‌ಗಾಂಧಿಯವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದರು.
ನರೇಂದ್ರ ಮೋದಿಗೆ ಹೃದಯವೇ ಇಲ್ಲ, ದೇಶಪ್ರೇಮವೂ ಇಲ್ಲ. ಯಾವ ವಿಚಾರ ಮಾತನಾಡಬೇಕೆಂಬ ಪ್ರಜ್ಞೆಯೂ ಇಲ್ಲ. ಇಂಥವರು ನಮ್ಮ ದೇಶದ ಪ್ರಧಾನಿಯಾಗಿರುವುದು ಜನರ ದುರ್ದೈವ. ಕೇವಲ ಮಾತಿನಿಂದ ಮರಳು ಮಾಡುವವರಿಗೆ ಜನ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೪೦ ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಹೇಳಿರುವ ಮೋದಿಗೆ ರಾಜಕೀಯ ಪರಿಜ್ಞಾನವಿಲ್ಲ ಎಂದು ಕುಟುಕಿದರು. ಅಮೇಥಿಯಲ್ಲಿ ರಾಹುಲ್‌ಗಾಂಧಿ, ರಾಯ್‌ಬರೇಲಿಯಲ್ಲಿ ಸೋನಿಯಾಗಾಂಧಿ ಸೋಲುತ್ತಾರೆ ಎಂದು ಹೇಳುತ್ತಿರುವ ಮೋದಿಯವರು ಎರಡೂ ಕ್ಷೇತ್ರದಲ್ಲಿ ಅವರಿಬ್ಬರೂ ಗೆದ್ದರೆ ನರೇಂದ್ರ ಮೋದಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದು ಖರ್ಗೆ ಸವಾಲು ಹಾಕಿದರು.
ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸೋಲುತ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಬಹುಶಃ ಯಡಿಯೂರಪ್ಪ ಅವರು ಒಳ್ಳೆಯ ಜ್ಯೋತಿಷಿ ಎನಿಸುತ್ತಿದೆ, ಭವಿಷ್ಯ ಹೇಳುತ್ತಿದ್ದಾರೆ.
ನಾವು ಕೆಲಸದ ಮೇಲೆ ನಂಬಿಕೆ ಇಟ್ಟವರು. ಜನರ ಪ್ರತಿಕ್ರಿಯೆ ನೋಡಿ ನನ್ನ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದೇನೆ. ಯಡಿಯೂರಪ್ಪ ಜ್ಯೋತಿಷ್ಯದ ಮೇಲೆ ಹೇಳುತ್ತಿರಬಹುದು ಎಂದು ತಿರುಗೇಟು ನೀಡಿದರು