Sunday, November 24, 2024
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ: ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಶೂನ್ಯದಿಂದ ಆರಂಭವಾದ ಜೀವನದಲ್ಲಿ ಯಶಸ್ಸು ಖಂಡಿತ: ಡಾ. ಪೀಟರ್ ವಿಲ್ಸನ್ ಪ್ರಭಾಕರ್ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬನ ಜೀವನ ಶೂನ್ಯದಿಂದ ಆರಂಭವಾದರೆ ಬದುಕಿನಲ್ಲಿ ಯಶಸ್ಸು ಖಂಡಿತ. ಏಕೆಂದರೆ ಸೋಲು, ಕಷ್ಟ, ನಷ್ಟಗಳನ್ನು ಮನಗಂಡರೆ ಸಾಧನೆ ಸುಲಭ. ಅದೇ ರೀತಿ ಸಾಧನೆಯನ್ನು ನಾವೇ ಸ್ವತಃ ಕೊಚ್ಚಿಕೊಳ್ಳುವ ಬದಲು ಸಾಧಿಸಿ ತೋರಿಸಿದರೆ ಸಮಾಜವೇ ಗುರುತಿಸುವಂತಾಗುತ್ತದೆ ಇದುವೇ ಸಾಧನೆ. ವಿದ್ಯಾರ್ಥಿಯಾಗಿದ್ದಾಗ ಪಠ್ಯ ಶಿಕ್ಷಣವು ಸಾಧನೆಗೆ ಮೆಟ್ಟಿಲಾದರೆ ಇಲ್ಲಿ ಲಭಿಸಿದ ಅನುಭವ ಮುಂದಿನ ಬದುಕಿಗೆ ಸಲಹೆ, ಸಹಕಾರವನ್ನು ನೀಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಅಂತಿಮ ವರ್ಷದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಮೂಲಕ ಸಾಧನೆಯನ್ನು ಮಾಡಿ ಹೆಸರುಗಳಿಸಬಹುದು. ಸಮಾಜದಲ್ಲಿ ವ್ಯಕ್ತಿತ್ವಕ್ಕೆ ಮೊದಲ ಗೌರವ ಹಾಗಾಗಿ ಆತನ ಗುಣನಡತೆ ಅಥವಾ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬನ ಕೆಲಸ. ಯಾವುದೇ ವ್ಯಕ್ತಿ ಸಮಾಜದಲ್ಲಿ ಮುಂದೊಂದು ದಿನ ದೊಡ್ಡ ವ್ಯಕ್ತಿಯಾದಾಗ ಜೀವನ ಕ್ರಮವನ್ನು ಅರ್ಥಮಾಡಿಕೊಂಡು ಜೀವಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಯಾಗಿದ್ದಾಗ ಹಲವರು ಸ್ನೇಹಿತರಾಗುತ್ತಾರೆ. ಆದರೆ ಮುಂದೆ ಸಾವಿರಾರು ಮಂದಿ ಎದುರಾದಾಗ ನಿಮಗೆ ಸಹಾಯ ಮಾಡುವಾತನೇ ನಿಜವಾದ ಸ್ನೇಹಿತ. ಕಾಲೇಜು ಶಿಕ್ಷಣವು ಜ್ಞಾನದ ಜೊತೆಗೆ ಸ್ನೇಹ, ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅದನ್ನು ಕಾಪಾಡಿಕೊಂಡು ಸಮ ಬಾಳ್ವೆಯ ಜೀವನ ನಡೆಸಿ ಎಂದು ಕಿವಿಮಾತಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಸಂಯೋಜಕಿ ಡಾ. ವಿಜಯ ಸರಸ್ವತಿ ಮಾತನಾಡಿ, ಕಾಲೇಜಿನಲ್ಲಿ ಪಠ್ಯ ವಿಷಯದ ಜೊತೆಗೆ ಜೀವನ ನಡೆಸುವ ಮೌಲ್ಯಯುತ ಶಿಕ್ಷಣವನ್ನು ಪಡೆಯುವ ಅವಕಾಶ ಲಭಿಸಿದೆ. ಇವುಗಳನ್ನು ಸರಿಯಾಗಿ ಜೀವನದಲ್ಲಿ ಉಪಯೋಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಜಯ ಗಣಪತಿ ರಮೇಶ ಕಾರಂತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ, ರಸಾಯನಶಾಸ್ತ್ರ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಧುರ ಸ್ವಾಗತಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಂದಿಸಿದರು. ಉಪನ್ಯಾಸಕಿಯರಾದ ಅನನ್ಯಾ ಮತ್ತು ರಾಧಿಕ ಕಾನತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.