ವಿಟ್ಲ : ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೊಳಪಟ್ಟ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಸಭಾಭವನವು ಮೇ 13ರಂದು ಲೋಕಾರ್ಪಣೆಗೊಳ್ಳಲಿದೆ. ಅದರ ಅಂಗವಾಗಿ ಮೇ 12 ಮತ್ತು 13ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಮೇ.12ರಂದು ಸಂಜೆ 6ಕ್ಕೆ ಸಪ್ತಶುದ್ಧಿ, ಪುಣ್ಯಾಹವಾಚನ, ಸಂಜೆ 7ಕ್ಕೆ ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಮೇ 13ರಂದು ಬೆಳಗ್ಗೆ 7.08 ಗಂಟೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಪ್ರವೇಶ, 7.30ಕ್ಕೆ ಗಣಪತಿ ಹವನ, 8.30ಕ್ಕೆ ಶ್ರೀದೇವರಿಗೆ ಏಕಾದಶರುದ್ರ ಶಿವಪೂಜೆ, 9.30ಕ್ಕೆ ಪುರುಷಸೂಕ್ತ ಹವನ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2ಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಚಿತ್ತೈಸಲಿದ್ದು, 2.15ಕ್ಕೆ ನೂತನ ಭವನ ಲೋಕಾರ್ಪಣೆಗೈದು, ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಕ್ಯಾಂಪ್ಕೊ ಅಧ್ಯಕ್ಷ ಶ್ರೀ ಎಸ್.ಆರ್.ಸತೀಶ್ಚಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀ ಟಿ.ಜಿ.ರಾಜಾರಾಮ ಭಟ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ಎಲ್.ಎನ್.ಕೂಡೂರು ಭಾಗವಹಿಸಲಿದ್ದಾರೆ.
ಬಳಿಕ ಸಂಜೆ 4ಕ್ಕೆ ಡಿವಿಜಿ ಅವರ ಕಗ್ಗದ ಬೆಳಕು ಕುರಿತು ಕವಿತಾ ಅಡೂರು ವ್ಯಾಖ್ಯಾನ ನೀಡಲಿದ್ದಾರೆ. ಇದೇ ಸಂದರ್ಭ ಸಭಾಭವನಕ್ಕೆ 5000 ರೂ.ಗಳಿಗಿಂತ ಅಧಿಕ ಮೊತ್ತ ದೇಣಿಗೆ ನೀಡಿದವರನ್ನು ಗೌರವಿಸಲಾಗುವುದು. ಮೇ 13ರಂದು ಅವರು ಸಭಾಕಾರ್ಯಕ್ರಮದಲ್ಲಿ ಹಾಜರಿರಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀ ಸಿ.ವಿ.ಗೋಪಾಲಕೃಷ್ಣ ಭಟ್ ಮತ್ತು ಅಧ್ಯಕ್ಷ ಶ್ರೀ ರಾಕೋಡಿ ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.