ವಿಜಯಪುರ (ಡಿ.10): ನಾವು ಹಿಂದೂ ಧರ್ಮದವರಲ್ಲ. ಹಾಗಂತ ಹಿಂದೂ ವಿರೋಧಿಗಳಲ್ಲ. ನಾವು ಲಿಂಗಾಯತರು ಸ್ವತಂತ್ರರು. ನಮ್ಮದು ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಚಿವ ಎಂ ಬಿ ಪಾಟೀಲ್ ಲಿಂಗಾಯಿತ ಸಮಾವೇಶದಲ್ಲಿ ಹೇಳಿದ್ದಾರೆ.
ಲಿಂಗಾಯಿತ ಧರ್ಮ ಮೊದಲು ಪ್ರತ್ಯೇಕ ಧರ್ಮವಾಗಿಯೇ ಇತ್ತು. ಸದ್ಯ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗಬೇಕು. ಬೇರೆಯವರಂತೆ ಗೊಡ್ಡು ಪುರಾಣ ಹೇಳುತ್ತಿಲ್ಲ. ಸತ್ಯವನ್ನ ಹೇಳುತ್ತಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕಿದೆ. ಪಂಚಪೀಠ ಸ್ವಾಮೀಜಿಗಳಿಗೆ ಶಂಕರಾಚಾರ್ಯರು ನೀವು ಲಿಂಗಾಯತರು ಅಂತ ಹೇಳಿದ್ದಾರೆ. ವೇದಗಳನ್ನು ನಂಬದ ನೀವು ಲಿಂಗಾಯತರು ಅಂತ ಹೇಳಿದ್ದಾರೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡದೆ ಹೋದರೆ ಹೈಕೋರ್ಟ್ ಮೆಟ್ಟಿಲೇರಲಾಗುವುದು. ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಮೂಲಕ ಕಾನೂನು ಹೋರಾಟ ಮಾಡಲಾಗುತ್ತದೆ. ಸ್ವತಂತ್ರ ಲಿಂಗಾಯತ ಧರ್ಮ ದಾಖಲಾತಿಗಳನ್ನ ನೋಡಿ ಬದಲಾಗುವಂತೆ ಸ್ವಾಮೀಜಿಗಳಲ್ಲಿ ಎಂ ಬಿ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.
ಧರ್ಮಕ್ಕೆ ಮಾನ್ಯತೆ ಸಿಕ್ಕಲ್ಲಿ ಎಲ್ಲರು ಓಡಿ ಬರುತ್ತಾರೆ. ತಲೆ ಕೆಳಗೆ ಕಾಲು ಮೇಲೆ ಮಾಡಿದರೂ ನನ್ನ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವಿಲ್ಲ. ಲಿಂಗಾಯತ ಸಮಾವೇಶ ವಿರುದ್ಧ ನನ್ನ ಕ್ಷೇತ್ರ ತ್ರಿಕೋಟದಲ್ಲಿ ವೀರಶೈವ ಸಮಾವೇಶ ಮಾಡಿದ್ದಾರೆ.
ಅಲ್ಲಿ ಕೇವಲ 200 ಜನ ಮಾತ್ರ ಇದ್ದರು. ಈ ಬಾರಿ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಗೆದ್ದು ಬರ್ತಿನಿ. ನನ್ನ ಜೊತೆಗೆ ಬಸವಣ್ಣನಿದ್ದಾನೆ ಎಂದು ಪಾಟೀಲ್ ಹೇಳಿದ್ದಾರೆ.