ಸದ್ಯದ ಮಟ್ಟಿಗೆ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಬ್ರಾಂಡ್ ವಿಲನ್ ಯಾರು ಅಂದ್ರೆ.. ಅದು ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ್. ಹೀರೋ ಆಗಿ ಹಲವಾರು ಸಿನೆಮಾಗಳನ್ನು ಮಾಡಿದ್ದರೂ ಅದ್ಯಾವುದೂ ಧನಂಜಯ್ ಗೆ ದೊಡ್ಡ ರೀತಿಯಲ್ಲಿ ಯಶಸನ್ನು ತಂದು ಕೊಡಲಿಲ್ಲ.
‘ಟಗರು’ ಸಿನೆಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಂಡ ಧನಂಜಯ್ ಮತ್ತೆ ಹಿಂತಿರುಗಿ ನೋಡೇ ಇಲ್ಲ. ಸಾಲು ಸಾಲು ಸ್ಟಾರ್ ಹೀರೋಗಳ ಚಿತ್ರಗಳಿಗೆ ಇವರನ್ನು ಬುಕ್ ಮಾಡಲಾಗುತ್ತಿದೆ. ಶಿವರಾಜ್‍ಕುಮಾರ್ ಆದಮೇಲೆ ದರ್ಶನ್ ಜೊತೆ ‘ಯಜಮಾನ’ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದ ಮೂಲಕ ಅಷ್ಟೇನು ಗಮನ ಸೆಳೆಯದಿದ್ದರೂ, ಇದೀಗ ಚಿತ್ರೀಕರಣಗೊಳ್ಳುತ್ತಿರುವ ಪುನೀತ್ ಚಿತ್ರ ‘ಯುವರತ್ನ’, ಧ್ರುವ ಸರ್ಜಾ ಜೊತೆ ‘ಪೊಗರು’, ದುನಿಯಾ ವಿಜಯ್ ಜೊತೆ ‘ಸಲಗ’ ಚಿತ್ರಗಳಲ್ಲಿ ಹೀರೋಗೆ ಸಮಾನವಾಗಿ ಆರ್ಭಟಿಸಲಿದ್ದಾರೆ.
ಇದ್ರ ಜೊತೆಗೆ ಜಗ್ಗೇಶ್ ಜೊತೆಗೆ ‘ತೋತಾಪುರಿ’ ಸಿನೆಮಾದಲ್ಲೂ ಪ್ರಮುಖ ಪಾತ್ರವನ್ನು ಮಾಡಿ ಮುಗಿಸಿದ್ದಾರೆ. ಇವೆಲ್ಲ ವಿಲನ್ ಆಗಿ ಮತ್ತು ಪೋಷಕ ಪಾತ್ರಗಳಾಗಿ ಅಭಿನಯಿಸಿದ್ದು, ಇವುಗಳಲ್ಲದೆ ನಾಯಕ ನಟನಾಗಿ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಮೇಲೆ ಎಲ್ಲರಿಗೂ ಕುತೂಹಲ ಇದೆ. ಹಾಗು ಟಗರು ಚಿತ್ರದ ‘ಡಾಲಿ’ ಪಾತ್ರವನ್ನೇ ಶೀರ್ಷಿಕೆಯನ್ನಾಗಿ ಸಿನೆಮಾ ಮಾಡಲಾಗುತ್ತಿದೆ. ಇಲ್ಲಿ ಟಗರು ಚಿತ್ರದ ಡಾಲಿ ಪಾತ್ರವೂ ಹಾಗೆಯೇ ಮುಂದುವರಿಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಈ ವರ್ಷ ಡಾಲಿ ಅಭಿಮಾನಿಗಳಿಗೆ ಹಬ್ಬದ ವಾತವರಣ ನಿಮಾಣವಾಗುವುದು ಖಚಿತ.