ಮಡಿಕೇರಿ ರೆಸಾರ್ಟಿನಲ್ಲಿ ಸಿಎಂ ಕುಟುಂಬ ವಿಶ್ರಾಂತಿ : ರೆಸಾರ್ಟ್ ಶುಲ್ಕ ದಿನವೊಂದಕ್ಕೆ 80 ಸಾವಿರ..! – ಕಹಳೆ ನ್ಯೂಸ್
ಮಡಿಕೇರಿಯಿಂದ 6 ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ 190 ಎಕರೆ ವಿಸ್ತೀರ್ಣ ಹೊಂದಿರುವ ರೆಸಾರ್ಟಿನಲ್ಲಿ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ, ಪುತ್ರ ನಿಖಿಲ್, ಸಚಿವ ಸಾರಾ ಮಹೇಶ್ ಮತ್ತು ಕುಟುಂಬ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮೊದಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು.
ಶುಕ್ರವಾರ ರಾತ್ರಿ 7.30ಕ್ಕೆ ಸಿಎಂ ಮತ್ತು ಕುಟುಂಬ ರೆಸಾರ್ಟ್ ಪ್ರವೇಶಿಸಿದೆ. ಸಾರಾ ಮಹೇಶ್ ತಮ್ಮ ಹೆಸರಿನಲ್ಲಿ ಒಟ್ಟು 6 ಕಾಟೇಜ್ ಬುಕ್ ಮಾಡಿದ್ದಾರೆ. ದಿನವೊಂದಕ್ಕೆ 80 ಸಾವಿರ ಶುಲ್ಕ ಇರುವ ಈ ಕಾಟೇಜ್‍ನಲ್ಲಿ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ ಮೊದಲಾದ ಸೌಲಭ್ಯಗಳಿವೆ.
ಸಿಎಂ ತಂಗುವ ಕಾಟೇಜ್‍ಗೆ ಬೆಂಗಳೂರಿನ ಉನ್ನತ ದರ್ಜೆಯ 8 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾಯಿಂಟ್ ಸೆಟ್ಟಾದ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಇದ್ದು, ಸೆಟ್ಟಾ ಒಳಗಡೆ ಗರಿಷ್ಠ ಖಾಸಗಿತನ ಇರಲಿದೆ ಎನ್ನಲಾಗಿದೆ. ಅಲ್ಲಿನ ಯಾವುದೇ ಸಿಬ್ಬಂದಿ ಮೊಬೈಲ್ ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿದೆ.
ರೆಸಾರ್ಟ್ ಒಳಗೆ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಸಿಎಂ ವಾಸ್ತವ್ಯ ಹಿನ್ನಲೆ ರೆಸಾರ್ಟಿನಲ್ಲಿ ಭಾರೀ ಪೊಲೀಸ್ ಹಾಗೂ ಖಾಸಗಿ ಭದ್ರತೆ ಕೈಗೊಳ್ಳಲಾಗಿದೆ. ಸಚಿವ ಸಾ.ರಾ ಮಹೇಶ್, ಎಂಎಲ್ ಸಿ ಭೋಜೇಗೌಡ ಸಿಎಂ ಕುಮಾರಸ್ವಾಮಿ ಜೊತೆಗಿದ್ದಾರೆ.
ಮಡಿಕೇರಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ ಗಣೇಶ್ ಕುಮಾರ ಸ್ವಾಮಿ ಅವರನ್ನು ಕೊಪ್ಪ ಗೇಟ್ ಬಳಿ ಸ್ವಾಗತಿಸಿದರು. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಇದೇ ರೆಸಾರ್ಟ್‍ನಲ್ಲಿ ತಂಗಿದ್ದರು. ಮಾಧ್ಯಮಗಳನ್ನು ದೂರವೇ ಇಡಲಾಗಿದೆ.