ಮಡಿಕೇರಿ : ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಜ್ಯ ಸರಕಾರ ಇದೀಗ ಈ ನಿಯಮಾವಳಿಯಲ್ಲಿ ಮಾರ್ಪಾಡು ಮಾಡಿ, ವಾಸದ ಮನೆ ನಿರ್ಮಾಣಕ್ಕಾಗಿ 15ರಿಂದ 20ಸೆಂಟ್ ಜಾಗವನ್ನು ಭೂ ಪರಿವರ್ತನೆ ಮಾಡಬಹುದೆಂದು ತಿಳಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ವಾಸದ ಮನೆ ನಿರ್ಮಾಣಕ್ಕೆ ಕೃಷಿ ಜಮೀನನ್ನು ಪರಿವರ್ತನೆ ಮಾಡಲು ರಾಜ್ಯ ಸರಕಾರ ಕೆಲವು ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿದೆ.
ಈ ಸಂಬಂಧ ಮೇ 8ರಂದು ಸರಕಾರದ ಕಂದಾಯ ಇಲಾಖೆ ಪೀಠಾಧಿಕಾರಿ ಅವರು ಕೊಡಗು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು, ಅದರಂತೆ ಕೆಲವು ಷರತ್ತುಗಳಿಗೆ ಒಳಪಟ್ಟು ತಹಶೀಲ್ದಾರ್, ಉಪ ವಿಭಾಗಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ ನೀಡುವ ವರದಿಯನ್ನಾಧರಿಸಿ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಬಹುದೆಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ವಿದಿಸಿರುವ ಷರತ್ತುಗಳು : ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯವರು ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ ‘ನಾನ್ ಸ್ಟೇಬಲ್ ಏರಿಯಾ’ ಇದ್ದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ಭೂ ಪರಿವರ್ತನೆಗೊಳಿಸುವ ಜಗ ನದಿ, ಹಳ್ಳಗಳಿಂದ ಕನಿಷ್ಟ 10 ಮೀಟರ್ ದೂರದಲ್ಲಿರಬೇಕು.
ತೀವ್ರತರವಾದ ಇಳಿಜಾರು ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. 2018ರ ಮಳೆಗಾಲದಲ್ಲಿ ಭೂ ಕುಸಿತ ಉಂಟಾದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.