ಅಮೇರಿಕಾದ ಅರಿಝೋನಾ ಬೋಯಿಂಗ್ ಉತ್ಪಾದನಾ ಘಟಕದಲ್ಲಿ ಭಾರತೀಯ ವಾಯು ಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್ ಹಸ್ತಾಂತರಿಸಲಾಗಿದ್ದು ಇದರಿಂದ ಐಎಎಫ್ ದಾಳಿ ಸಾಮರ್ಥ್ಯ ಇನ್ನಷ್ಟು ಬಲಗೊಂಡಂತಾಗಿದೆ.
ಐಎಎಫ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಎಎಚ್-64ಇ(ಐ) ಅಪಾಚೆ ದಾಳಿ ಹೆಲಿಕಾಪ್ಟರ್ ಪೂರೈಕೆಯು ಭಾರತೀಯ ವಾಯು ಪಡೆಯ ಆಧುನೀಕರಣದಲ್ಲಿ ಇರಿಸಲಾಗಿರುವ ಮಹತ್ತರ ಹೆಜ್ಜೆ ಯಾಗಿದೆ. ಇದನ್ನು ಐಎಎಫ್ ನ ಅವಶ್ಯಕತೆಗೆ ತಕ್ಕಂತೆ ಮಾರ್ಪಡಿಸಲಾಗಿದೆ. ದುರ್ಗಮ ಪರ್ವತ ಪ್ರದೇಶಗಳಲ್ಲಿ ಶತ್ರುಗಳ ವಿರುದ್ಧ ನಿಖರ ದಾಳಿಗೆ ಈ ಅಪಾಚೆ ಹೆಲಿಕಾಪ್ಟರ್ ಅತ್ಯಂತ ಪರಿಣಾಮಕಾರಿಯಾಗಿದೆ.
ಅಪಾಚೆ ದಾಳಿ ಹೆಲಿಕಾಪ್ಟರ್ ಬಹುಸ್ತರದ ಪಾತ್ರ ನಿರ್ವಹಿಸುವ ಅಪಾರ ಸಾಮರ್ಥ್ಯ ಹೊಂದಿದೆ. ಇದನ್ನು ಅಮೆರಿಕ ಸೇನೆ ಈಗಾಗಲೇ ತನ್ನ ವಾಯು ಪಡೆಗೆ ಸೇರಿಸಿಕೊಂಡಿದೆ.
2015ರ ಸೆಪ್ಟಂಬರ್ ನಲ್ಲಿ ಐಎಎಫ್ ಬಹು-ಶತಕೋಟಿ ಡಾಲರ್ಗಳ ಗುತ್ತಿಗೆ ಒಪ್ಪಂದವನ್ನು ಅಮೆರಿಕ ಸರಕಾರ ಮತ್ತು ಬೋಯಿಂಗ್ ಲಿಮಿಟೆಡ್ ಜತೆಗೆ ಮಾಡಿಕೊಂಡಿದ್ದ ಪ್ರಕಾರ ಭಾರತಕ್ಕೆ 22 ಅಪಾಚೆ ದಾಳಿ ಹೆಲಿಕಾಪ್ಟರ್ ಗಳು ಪೂರೈಕೆಯಾಗಲಿವೆ. ಈ ವರ್ಷ ಜುಲೈ ನಲ್ಲಿ ಐಎಎಫ್ ಗೆ ಈ ಹೆಲಿಕಾಪ್ಟರ್ ಗಳ ಮೊದಲ ಕಂತು ಪೂರೈಕೆಯಾಗಲಿದೆ.