ಬಂಟ್ವಾಳ: ರಿಕ್ಷಾಕ್ಕೆ ಬೈಕ್ ಡಿಕ್ಕಿಯಾಗಿ ರಿಕ್ಷಾ ಪಲ್ಟಿಯಾದ ಘಟನೆ ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಮುಂಭಾಗದ ಪ್ಲೈ ಒವರ್‌ನಲ್ಲಿ ಶನಿವಾರ ಮಧ್ಯಾಹ್ನ ವೇಳೆ ನಡೆಯಿತು. ಬಿಸಿರೋಡ್ ಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಅತಿಯಾದ ವೇಗದಲ್ಲಿ ಬಂದ ಬೈಕ್ ಚಾಲಕ ನಿಯಂತ್ರಣ ತಪ್ಪಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಬೈಕ್ ಸವಾರ ಪರ್ಲಿಯಾ ನಿವಾಸಿ ಶರೀಪ್ ಬೈಕಿನಿಂದ ಬಿದ್ದು ಅಲ್ಪ ಸ್ವಲ್ಪ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆ.ಎಸ್.ಆರ್.ಟಿ.ಸಿ ಮುಂಭಾಗದಲ್ಲಿ ಮೆಲ್ಕಾರ್ ಟ್ರಾಫಿಕ್ ಠಾಣಾ ಪೋಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಟ್ರಾಫಿಕ್ ಠಾಣಾ ಪೋಲೀಸರನ್ನು ನೋಡಿದ ಬೈಕ್ ಸವಾರ ಶರೀಫ್ ಅವರು ಪೋಲೀಸರಿಂದ ತಪ್ಪಿಸಿ ಹೋಗುವ ಉದ್ದೇಶದಿಂದ ಅತಿಯಾದ ಚಾಲನೆಗೆ ಮುಂದಾದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದರು. ವಾಹನ ತಪಾಸಣೆ ನಡೆಸುವುದರಿಂದ ಅಪಘಾತ ನಡೆದಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು. ಆದರೆ ಪೋಲೀಸರು ಇದನ್ನು ಅಲ್ಲಗಳೆದಿದ್ದು ತಪಾಸಣೆ ಮಾಡುತ್ತಿದ್ದ ವೇಳೆ ಅಪಘಾತ ನಡೆದಿಲ್ಲ ಎಂದು ಟ್ರಾಫಿಕ್ ಠಾಣಾ ಎಸ್. ಐ. ಮಂಜುನಾಥ್ ತಿಳಿಸಿದ್ದಾರೆ.