ಬೌದ್ಧರ ಪವಿತ್ರ ದಿನವಾದ ಬುದ್ದ ಪೌರ್ಣಿಮೆ ದಿನದಂದು ಬಾಂಗ್ಲಾದೇಶದ ಜಮಾತ್-ಉಲ್-ಮುಜಾಯಿದ್ದೀನ್ ಅಥವಾ ಇಸ್ಲಾಮಿಕ್ ಸ್ಟೇಟ್ ಉಗ್ರರು ದೇಶದ ನಾನಾ ಕಡೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿರುವುದನ್ನು ಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿದೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಈಶಾನ್ಯ ರಾಜ್ಯಗಳು ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಬಿಗಿಭದ್ರತೆ ಕೈಗೊಳ್ಳಬೇಕೆಂದು ಗೃಹ ಇಲಾಖೆಗೆ ಗುಪ್ತಚರ ವಿಭಾಗ ಸೂಚನೆ ಕೊಟ್ಟಿದೆ.
ಗರ್ಭಿಣಿ ವೇಷದಲ್ಲಿರುವ ಜಮಾತ್-ಉಲ್-ಮುಜಾಯಿದ್ದೀನ್ ಸಂಘಟನೆಯ ಆತ್ಮಾಹುತಿ ದಳದ ಮಹಿಳಾ ಉಗ್ರರು ಭಾರತದ ಬುದ್ದ ದೇವಾಲಯಗಳು ಇಲ್ಲವೇ ಹಿಂದೂಗಳ ಮಂದಿರಗಳನ್ನು ಗುರಿಯಾಗಿಟ್ಟುಕೊಂಡು ಭಾರೀ ಪ್ರಮಾಣದ ದಾಳಿ ನಡೆಸಲು ಕಳೆದ ಹಲವು ದಿನಗಳಿಂದ ಸಂಚು ರೂಪಿಸಿರುವುದನ್ನು ಪತ್ತೆ ಮಾಡಿದೆ.
ಶ್ರೀಲಂಕಾದಲ್ಲಿ ಪವಿತ್ರ ಈಸ್ಟರ್ ದಿನದಂದು ರಾಜಧಾನಿ ಕೊಲಂಬೊದಲ್ಲಿ ನಡೆದ ದಾಳಿಗೂ ಈಗ ಭಾರತದಲ್ಲಿ ನಡೆಸಲು ಸಂಚು ರೂಪಿಸಿರುವ ಉಗ್ರರೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇರುವುದರಿಂದ ಕೂಡಲೇ ಪ್ರಮುಖ ಧಾರ್ಮಿಕ ಕೇಂದ್ರಗಳು, ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಆಸ್ತಿಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ರೈಲು, ರಾಷ್ಟ್ರಪತಿ ಭವನ, ಪ್ರವಾಸಿ ನಿವಾಸ, ರಾಯಭಾರಿ ಕಚೇರಿಗಳು, ಸಂಸತ್ ಆವರಣ, ಸುಪ್ರೀಂಕೋರ್ಟ್, ಸಮುದ್ರ ತೀರ ಪ್ರದೇಶಗಳು, ಕರಾವಳಿ ತೀರಪ್ರದೇಶ, ಗಣ್ಯರ ನಿವಾಸ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆಯನ್ನು ಕೈಗೊಳ್ಳಬೇಕೆಂದು ಸೂಚನೆ ಕೊಡಲಾಗಿದೆ.
ಗುಪ್ತಚರ ವಿಭಾಗ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಕಳೆದ ರಾತ್ರಿಯೇ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ದೇಶದ ಇತರೆ ರಾಜ್ಯಗಳ ಕಾರ್ಯದರ್ಶಿಗಳ ಜೊತೆಯೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ತಿರುಗಾಟ ನಡೆಸುತ್ತಿದ್ದರೆ ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆಯೂ ಸೂಚನೆ ಕೊಡಲಾಗಿದೆ.
ಹೈಅಲರ್ಟ್: ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರನ್ನು ಬಿಗಿ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ. ರೈಲ್ವೆ ನಿಲ್ದಾಣಗಳಲ್ಲೂ ಪ್ರತಿಯೊಬ್ಬರು ಮೆಟಲ್ ಡಿಟೆಕ್ಟೀವ್ ಮೂಲಕವೇ ಒಳಪ್ರವೇಶಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ.
ಇದೇ ರೀತಿ ಪ್ರಮುಖ ಧಾರ್ಮಿಕ ಕಟ್ಟಡಗಳು ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ವಲಯದಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಉಗ್ರರ ಸಂಭಾವ್ಯ ದಾಳಿಯನ್ನು ತಡೆಯಲು ಎಲ್ಲಾ ರೀತಿಯಲ್ಲೂ ನಾವ ಸರ್ವಸನ್ನದ್ದವಾಗಿದ್ದೇವೆ ಎಂದು ಕೇಂದ್ರ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಸ್ಥಳೀಯ ಪೊಲೀಸರು ಶಂಕಿತ ಉಗ್ರರ ಎಡೆಮುರಿ ಕಟ್ಟುತ್ತಿರುವುದರಿಂದ ಉಗ್ರರು ಭಾರತ-ಶ್ರೀಲಂಕಾ ಜಲಮಾರ್ಗದ ಮೂಲಕ ಭಾರತದೊಳಗೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಇಡೀ ಕರಾವಳಿ ತೀರಾಪ್ರದೇಶದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಭದ್ರತಾಪಡೆಗಳ ಪರಾಮರ್ಶೆ ನಡೆಸಿದ್ದು, ಯಾವುದೇ ರೀತಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ.