ಕೊಚ್ಚಿ, ಕೇರಳ: ಈ ಬಾರಿಯ ತ್ರಿಶ್ಯೂರ್ ಪೊರಂನಲ್ಲಿ 54 ವರ್ಷದ ಥೇಚಿಕೊಟ್ಟುಕಾವು ರಾಮಚಂದ್ರನ್ ಹೆಸರಿನ ಆನೆಗೆ ಪಾಲ್ಗೊಳ್ಳಲು ಅವಕಾಶ ನೀಡುವ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಅಂತ ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೇ, ಈ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದೆ.
ಭಾರತದ ಅತೀ ಎತ್ತರದ ಸಾಕಾನೆ ಎಂಬ ಕೀರ್ತಿಗೆ ಪಾತ್ರವಾಗಿರುವ ರಾಮಚಂದ್ರನ್ ಆನೆಯು ತ್ರಿಶ್ಯೂರ್ನ ವಡಕ್ಕುನಾಥನ್ ದೇವಾಲಯದ ದಕ್ಷಿಣ ಭಾಗದಲ್ಲಿರುವ ಬಾಗಿಲನ್ನು ತೆರೆಯುವ ಮೂಲಕ ಪೂರಂಗೆ ಚಾಲನೆ ನೀಡುತ್ತಿತ್ತು. ಆದರೆ ಈ ಸಲ ಆನೆಯನ್ನ ಬಳಸಿಕೊಳ್ಳುವುದಕ್ಕೆ ಜಿಲ್ಲಾಡಳಿತವು ನಿಷೇಧ ಹೇರಿತ್ತು.
ಈ ಆನೆಯು ಭಾಗಶಃ ಕುರುಡಾಗಿದೆ. ಹೀಗಾಗಿ ಉತ್ಸವದಲ್ಲಿ ಆನೆಯ ಪಾಲ್ಗೊಳ್ಳುವುದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿತ್ತು. ಇದರ ವಿರುದ್ಧ ಪೂರಂನ ಪ್ರಮುಖ ಆಚರಣೆಗಳಲ್ಲಿ ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಆನೆಯ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಪೂರಂ ಆಚರಣೆಗಳಲ್ಲಿ ಈ ಆನೆಯನ್ನ ಬಳಸಿಕೊಳ್ಳಲು ಅಧಿಕಾರಿಗಳು ಅನುಮತಿ ನೀಡುವ ಸಾಧ್ಯತೆ ಇಲ್ಲ ಎಂದು ಆನೆಯ ಮಾಲೀಕರು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ. ಹೈಕೋರ್ಟ್ ಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆ ಡಿಸಿ, ವಿಭಾಗೀಯ ಅರಣ್ಯಾಧಿಕಾರಿ ಮತ್ತಿತರರನ್ನು ಒಳಗೊಂಡಿರುವ ತಜ್ಞರ ಸಮಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.