ಬೆಂಗಳೂರು: ಕಳೆದ 6 ನೇ ತಾರೀಕು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ. ಈ ಸಂಬಂಧ ಪಶ್ಚಿಮ ವಿಭಾಗದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 6ನೇ ತಾರೀಕು ವ್ಯಕ್ತಿಯೋರ್ವ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ. ಸೆಕ್ಯೂರಿಟಿ ಚೆಕ್ ಮಾಡುವ ವೇಳೆ ಮೆಟಲ್ ಡಿಟಕ್ಟರ್‌ನಲ್ಲಿ ಬಿಪ್ ಸೌಂಡ್ ಬಂದಿತ್ತು. ಬಳಿಕ ಅಲ್ಲಿನ ಸಿಬ್ಬಂದಿ ಆತನನ್ನ ಪಕ್ಕಕ್ಕೆ ನಿಲ್ಲುವಂತೆ ಹೇಳಿದ್ರು. ಆದ್ರೆ ನಂತರ ಆತ ಅಲ್ಲಿಂದ ಹೊರ ಹೋಗಿದ್ದ. ಬಳಿಕ ಡಿಸಿಪಿ ರವಿ ಚೆನ್ನಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ನಂತರ ಈತನ ಪತ್ತೆಗೆ ಒಂದು ತಂಡ ರಚನೆ ಮಾಡಲಾಗಿತ್ತು. ಸದ್ಯ ಈತನ ಬಗ್ಗೆ ಹಲವು ಕಡೆ ಮಾಹಿತಿ ಕಲೆ ಹಾಕಿದ್ದೇವೆ. ಈತ ಸಾಜೀದ್ ಖಾನ್, ರಾಜಸ್ಥಾನ ಮೂಲದ ವ್ಯಕ್ತಿ. ರಂಜಾನ್‍ಗಾಗಿ ಇಬ್ಬರು ಮಕ್ಕಳು ಪತ್ನಿಯ ಜೊತೆಗೆ ಬೆಂಗಳೂರಿಗೆ ಬಂದಿದ್ದ. ಆತನ ಸಂಬಂಧಿ ಬೆಂಗಳೂರಿನಲ್ಲಿ ಇದ್ದಾರೆ, ರಂಜಾನ್ ಹಿನ್ನೆಲೆ ಅವರ ಮನೆಗೆ ಬಂದಿದ್ದ. ಆದ್ರೆ ಆತನಿಗೆ ಮೆಟ್ರೋದಲ್ಲಿ ಹೋಗೊದು ಹೇಗೆ ಅಂತಾ ಗೊತ್ತಿರ್ಲಿಲ್ಲ. ಆತನ ಬಳಿ ಯಾವುದೇ ಆಯುಧಗಳಿರಲಿಲ್ಲ. ಅವನಿಗೆ ಭಾಷೆ ಬರುತ್ತಿಲ್ಲವಾದ್ದರಿಂದ ಭಯದಿಂದ ವಾಪಸ್ ಹೋಗಿದ್ದಾನೆ.
ಇನ್ನು ರಂಜಾನ್ ಅಗಿದ್ದರಿಂದ ಪತ್ನಿ ಜೊತೆ ಮಸೀದಿ ಬಳಿ ಭಿಕ್ಷಾಟನೆ ಮಾಡುತ್ತಿದ್ದ. ಎಲ್ಲಾ ಮುಗಿದ ಬಳಿಕ, ಸಂಜೆ ಮೆಟ್ರೋದಲ್ಲಿ ಸಂಬಂಧಿಕರ ಮನೆಗೆ ಹೋಗೊಕೆ ಬಂದಿದ್ದ. ಅವನ ಬಳಿ ಯಾವುದೇ ಆಯುಧಗಳಿರಲಿಲ್ಲಾ, ಎರಡು ತಾಯತ ಇದ್ದವು. ಅವು ಮೆಟಲ್ಸ್ ಆಗಿದ್ದರಿಂದ ಡಿಟೆಕ್ಟರ್‍ನಲ್ಲಿ ಸೌಂಡ್ ಬಂದಿದೆ ಅಷ್ಟೇ. ಕಳೆದ ರಾತ್ರಿ ನಾವು ಆತನನ್ನ ಆರ್‍ಟಿ ನಗರದ ಬಳಿ ವಶಕ್ಕೆ ಪಡೆದಿದ್ದೇವೆ. ಆತ ಹಾಗೂ ಅತನ ಪತ್ನಿಯನ್ನ ತೀವ್ರ ವಿಚಾರಣೆ ಮಾಡಿದ್ದೇವೆ. ಅಲ್ಲದೇ ಆತನ ಹುಟ್ಟೂರು ರಾಜಸ್ಥಾನದಲ್ಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಅಂತಾ ಹೇಳಿದ್ದಾರೆ.