ಮುಂಬೈ: ಟೀಂ ಇಂಡಿಯಾ ಕಂಡಂತಹ ಅದ್ಭುತ ಫೀಲ್ಡರ್ ಗಳಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಒಬ್ಬರು. ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಕೈಫ್‍ಗೆ ಆ ಒಂದು ಘಟನೆಯನ್ನು ಮಾತ್ರ ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲವಂತೆ.
2002 ರಲ್ಲಿ ಕ್ರಿಕೆಟ್ ಕಾಶಿ ಲಾಡ್ರ್ಸ್‍ನಲ್ಲಿ ಇಂಗ್ಲೆಂಡ್ ವಿರುದ್ಧದ ನಾರ್ಥ್ ವೆಸ್ಟ್ ಸರಣಿಯಲ್ಲಿ ಅಂದಿನ ಕ್ಯಾಪ್ಟನ್ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಗೆಲುವನ್ನು ಸಂಭ್ರಮಿಸಿದ್ದು ಎಲ್ಲರಿಗೂ ಗೊತ್ತಿರೋದೆ. ಆದ್ರೆ ಆ ಪಂದ್ಯದಲ್ಲಿ ತಮ್ಮ ಮಗನ ಬ್ಯಾಟಿಂಗ್ ನೋಡುವುದನ್ನು ಬಿಟ್ಟು ಕೈಫ್ ಅವರ ತಂದೆ ತಾಯಿ ಸಿನಿಮಾ ನೋಡಲು ಹೋಗಿದ್ದರಂತೆ. ಇದು ಕೈಫ್‍ರನ್ನು ಇಂದಿಗೂ ಕಾಡ್ತಿದೆಯಂತೆ.
ಇಂಗ್ಲೆಂಡ್ ನೀಡಿದ ಬೃಹತ್ 325ರನ್‍ಗಳ ಟಾರ್ಗೆಟ್ ಬೆನ್ನಟ್ಟುತ್ತಿದ್ದ ಟೀಂ ಇಂಡಿಯಾಗೆ ಉತ್ತಮ ಆರಂಭವೇನೋ ಸಿಕ್ಕಿತ್ತು. ಆದರೆ ತಂಡದ ಮೊತ್ತ 150 ರ ಗಡಿ ದಾಟುವಷ್ಟರಲ್ಲಿ ಭಾರತ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಮ್ಯಾಚ್ ಸೋಲುತ್ತಾರೆ ಅಂತಾ ಯೋಚಿಸ್ತಿದ್ದ ಕೈಫ್‍ರ ತಂದೆ ತಾಯಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೇಲೆ ಭರವಸೆ ಇಟ್ಟುಕೊಂಡಿದ್ದರಂತೆ. ಆದರೆ ಐದನೇ ವಿಕೆಟ್ ಆಗಿ ಸಚಿನ್ ಕೂಡ ಔಟ್ ಆದರು.
ಹೀಗಾಗಿ ಭಾರತ ಸೋಲುತ್ತೆ ಎನ್ನೋ ಹತಾಶೆಯಲ್ಲಿ ಕೈಫ್‍ರ ತಂದೆ ತಾಯಿ ಟಿವಿ ಆಫ್ ಮಾಡಿದ್ರಂತೆ. ಅಲ್ಲದೆ ಸಿನಿಮಾ ನೋಡೋದಕ್ಕೆ ಪತಿ ಪತ್ನಿ ಇಬ್ಬರೂ ತೆರಳಿದ್ದರಂತೆ. ತನ್ನ ವೃತ್ತಿ ಜೀವನದ ಶ್ರೇಷ್ಠ ಆಟವನ್ನು ತನ್ನ ಹೆತ್ತವರು ಮಿಸ್ ಮಾಡಿಕೊಂಡರಲ್ಲ ಎನ್ನುವ ನೋವು ಕೈಫ್‍ರ ನೆನಪಿನಂಗಳದಲ್ಲಿ ಸದಾ ಕಾಡುತ್ತಿದೆಯಂತೆ.