6ನೇ ಹಂತದ ಚುನಾವಣೆ ಇಂದು ದೇಶದ 59 ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಪೈಕಿ ಕೇಂದ್ರ ಸಚಿವರಾದ ರಾಧಾಮೋಹನ್ ಸಿಂಗ್, ಹರ್ಷವರ್ಧನ್, ಮೇನಕಾ ಗಾಂಧಿ, ಎಸ್ಪಿ ಮುಖ್ಯಸ್ಥ ಅಖೀಲೇಶ್ ಯಾದವ್, ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಜ್ಯೋತಿರಾ ದಿತ್ಯ ಸಿಂಧಿಯಾ ಮತ್ತಿತರ ಪ್ರಮುಖ ನಾಯಕರ ಭವಿಷ್ಯವು ಇಂದು ನಿರ್ಧಾರವಾಗಲಿದೆ.
ಒಟ್ಟಾರೆ 979 ಅಭ್ಯರ್ಥಿಗಳು ಕಣದಲ್ಲಿದ್ದು, 10.17 ಕೋಟಿ ಮತದಾರರು ಈ ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಚುನಾವಣೆ ಇಂದು ಎದುರಿಸಲಿರುವ 59 ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳನ್ನು 2014ರಲ್ಲಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ದಿಲ್ಲಿಯಲ್ಲಿ ಈ ಬಾರಿ ಆಪ್-ಕಾಂಗ್ರೆಸ್-ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಕೂಡ ಬಿಜೆಪಿಯ ಲೆಕ್ಕಾಚಾರಕ್ಕೆ ಪೆಟ್ಟು ಕೊಡಲಿದೆಯೇ ಎಂಬ ಶಂಕೆಯಿದೆ. ಇನ್ನು ಮಧ್ಯಪ್ರದೇಶದ ಭೋಪಾಲ್ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ರನ್ನು ಬಿಜೆಪಿ ಕಣಕ್ಕಿಳಿಸಿದ್ದು, ದೇಶದ ಜನರ ಕಣ್ಣು ಈ ಕ್ಷೇತ್ರದತ್ತ ಹೊರಳುವಂತೆ ಮಾಡಿದೆ.