ಶ್ರೀಮಂತಿಕೆ ಅನ್ನೊ ಭೂತ ಬೆನ್ನು ಹತ್ತಿದರೆ ನಡೆದು ಬಂದ ಹಾದಿಯನ್ನ ಅನೇಕರು ಮರೆತು ಬಿಡ್ತಾರೆ, ಅದು ನಿಜ ಕೂಡ, ಆದ್ರೆ ಇಂತಹ ವ್ಯಕ್ತಿಗಳ ನಡುವೆ ಎಷ್ಟೇ ಶ್ರೀಮಂತಿಕೆ ಬಂದ್ರೂ, ಹಿಂದಿನ ದಿನ,ಹಾಗೂ ತನ್ನ ವೃತ್ತಿಯನ್ನ ಮರೆಯದೇ ತನ್ನದೇ ಹಾದಿಯಲ್ಲಿ ನಡೆಯುತ್ತಿರುವ ವ್ಯಕ್ತಿಗಳ ಸಾಲಿನಲ್ಲಿ ಬೆಳ್ತಂಗಡಿಯ ಬಿಜೆಪಿ ಶಾಸಕನ ತಂದೆ ಕೂಡ ಸೇರಿಕೊಂಡಿದ್ದಾರೆ.
ಹೌದು, ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ತಂದೆ, ಗರ್ಡಾಡಿ ಗ್ರಾಮದ ನಿವಾಸಿ ಮುತ್ತಣ್ಣ ಪೂಂಜಾ. ಇವರು ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್ ಸೈಕಲ್‍ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗ್ತಿರೋ ಚಿತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮಗ ಶಾಸಕನಾದ್ರೂ, ತಮ್ಮ ದಿನನಿತ್ಯದ ಜೀವನ ಶೈಲಿಯನ್ನು ಕಿಂಚಿತ್ತೂ ಬದಲಿಸಿಕೊಳ್ಳದೆ ಸರಳತೆಯನ್ನೆ ಮುಂದುವರೆಸಿಕೊಂಡು ಹೋಗಿದ್ದಾರೆ. ಹೀಗಾಗಿ ಮುತ್ತಣ್ಣ ಮತ್ತು ಅವರ ಸರಳತೆ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ.
ಇನ್ನು ಮುತ್ತಣ್ಣ ಅವರಿಗೆ ತಾವು ಜನಪ್ರಿಯವಾಗ್ತಿರೋದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ವೈರಲ್ ಆಗ್ತಿರೋದು ಯಾವುದೂ ಗೊತ್ತಿಲ್ಲ. ತಾವು ಬದುಕಿಗಾಗಿ ಕೃಷಿ ಅವಲಂಬಿಸಿದ್ದು, ಅಡಿಕೆ ತೋಟಕ್ಕೆ ಹೋಗಿ ಅಡಿಕೆ ಆರಿಸೋದು, ಸೈಕಲ್‍ನಲ್ಲಿ ಹೋಗಿ ಹಾಲು ಹಾಕಿ ಬರೋದು ತಮ್ಮ ದೈನಂದಿನ ಕಾಯಕ ಅಂತಾರೆ ಮುತ್ತಣ್ಣ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಹರೀಶ್ ಪೂಂಜಾ, ನಾನು ಶಾಸಕನಾದ್ರೂ, ಅವರ ಬದುಕಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕೃಷಿ ಮತ್ತು ಹೈನುಗಾರಿಕೆ ಅವರ ಕಾಯಕವಾಗಿದ್ದು, ಇದೇ ಅವರ ಫಿಟ್ನೆಸ್ ಗುಟ್ಟು ಕೂಡಾ ಅಂತಾರೆ. ಬೆಳಗ್ಗೆ 6 ಗಂಟೆಗೆ ಎದ್ರೆ ಡೈರಿಗೆ ಹಾಲು ಹಾಕಿ, ತಿಂಡಿ ತಿಂದು, ತೋಟಕ್ಕೆ ಹೋಗ್ತಾರೆ, ಸಂಜೆ ನಗರಕ್ಕೆ ಹೋಗಿ ಬಂದು, ರಾತ್ರಿ 8ಕ್ಕೆ ಮಲಗುತ್ತಾರೆ. ಇದು ಅವರ ಬದುಕಿನ ಶೈಲಿ ಅಂತಾ ತಮ್ಮ ತಂದೆಯ ಬಗ್ಗೆ ಹರೀಶ್ ಹೆಮ್ಮೆಯಿಂದ ಹೇಳಿಕೊಳ್ತಾರೆ.