ನವದೆಹಲಿ: ಅಖಂಡ ಹಿಂದೂ ಹೃದಯ ಸಾಮ್ರಾಟ ಪ್ರಭು ಶ್ರೀರಾಮ ಅಸ್ಥಿತ್ವಕ್ಕೆ ಈಗ ಮತ್ತೊಂದು ಪೂರಕ ಸಾಕ್ಷಿ ದೊರೆತಿದ್ದು, ರಾಮ ಸೇತುವೆ ಮಾನವ ನಿರ್ಮಿತ ಎಂದು ಅಮೆರಿಕಾದ ವಿಜ್ಞಾನಿಗಳು ನೀಡಿರುವ ವರದಿಯನ್ವಯ ಸೈನ್‌ಸ್ ಚಾನೆಲ್ ವರದಿ ಪ್ರಕಟಿಸಿದೆ.
ಇಂದು ಪ್ರಸಾರ ಮಾಡಲಾಗಿರುವ ಅಂತರ್ರಾಷ್ಟ್ರೀಯ ಮಾಧ್ಯಮದ ವರದಿಯಲ್ಲಿ ವಿವರವಾಗಿ ರಾಮಸೇತುವೆ ಕುರಿತಾಗಿ ಹೇಳಲಾಗಿದೆ. ಪ್ರಸ್ತುತ ಆಡೆಂ ಬ್ರಿಡ್‌ಜ್ ಎಂದು ಕರೆಯಲ್ಪಡುವ ರಾಮ ಸೇತುವೆ ಭಾರತ ಹಾಗೂ ಶ್ರೀಲಂಕಾ ನಡುವೆ ಬಹಳ ಹಿಂದೆಯೇ ನಿರ್ಮಾಣವಾಗಿದ್ದು, ಇದನ್ನು ಮಾನವರೇ ನಿರ್ಮಿಸಿದ್ದಾರೆ, ಇದು ಪ್ರಾಕೃತಿಕವಾಗಿ ನಿರ್ಮಾಣವಾದುದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಗ್ರಂಥ ಹಾಗೂ ನಂಬಿಕೆಗಳ ಪ್ರಕಾರ ಪ್ರಭು ಶ್ರೀ ರಾಮನ ಮಾರ್ಗದರ್ಶನದಲ್ಲಿ ಭಾರತದಿಂದ ಶ್ರೀಲಂಕಾಗೆ ರಾಮ ಸೇತುವೆಯನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಇದರ ಕುರಿತಾಗಿ ಸಾಕಷ್ಟು ವಿವಾದಗಳೂ ಸಹ ಸೃಷ್ಠಿಯಾಗಿವೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮೂಲಕ ಪ್ರತಿಷ್ಠಿತ ಸೈನ್‌ಸ್ ಚಾನೆಲ್ ರಾಮಸೇತುವೆ ಕುರಿತಾಗಿ ಬಹಳಷ್ಟು ಸಂಶೋಧನೆ ನಡೆಸಿ, ವರದಿ ಪ್ರಕಟಿಸಿದೆ.
ರಾಮೇಶ್ವರಂ ಬಳಿಯಿರುವ ಪಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಕುರಿತಾಗಿ ನಡೆದ ಸಂಶೋಧನೆಯಲ್ಲಿ ಅಮೆರಿಕಾದ ಭೂ ವಿಜ್ಞಾನಿಗಳು, ಪುರಾತತ್ವ ಸಂಶೋಧಕರು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದು, ರಾಮಸೇತುವ ಮಾನವ ನಿರ್ಮಿತ ಎನ್ನುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಮೆರಿಕಾರದ ಪುರಾತತ್ವ ಹಿರಿಯ ಸಂಶೋಧಕ ಚೆಲ್ಸಿಯಾ ರೋಸ್, ಇಲ್ಲಿನ ಮರಳಿನ ಮೇಲೆ ನಿರ್ಮಿಸಲಾಗಿರುವ ಬಂಡೆಗಳು ಸಾವಿರಾರು ವರ್ಷಗಳ ಹಿಂದಿನವು. ಇದನ್ನು ಗಮನಿಸಿದಾಗ ಇದಕ್ಕೆ ಒಂದು ಕತೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ವರದಿಯಲ್ಲಿ ವಿಜ್ಞಾನಿಗಳು ಉಲ್ಲೇಖಿಸಿರುವಂತೆ, ಇಲ್ಲಿ ನಿರ್ಮಿಸಲಾಗಿರುವ ಸೇತುವೆಯ ಕಲ್ಲುಗಳು ಅಂದಾಜು 7 ಸಾವಿರ ವರ್ಷಗಳಷ್ಟು ಹಳೆಯದಾಗಿವೆ. ಅಲ್ಲದೇ, ಸ್ಯಾಟಲೈಟ್ ಚಿತ್ರ ಹಾಗೂ ವೀಡಿಯೋಗಳನ್ನು ಕೂಲಂಕಶವಾಗಿ ವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಸೇತುವೆ ಪ್ರಾಕೃತಿಕವಾಗಿ ನಿರ್ಮಾಣವಾದುದಲ್ಲ ಬದಲಾಗಿ ಮಾನವ ನಿರ್ಮಿತ ಎನ್ನುವುದು ವೇದ್ಯವಾಗುತ್ತದೆ ಎಂದಿದ್ದಾರೆ.
ಇನ್ನೊಂದು ಆಯಾಮದಲ್ಲಿ, ಇಲ್ಲಿರುವ ಮರಳಿನ ಹಾದಿ ಪ್ರಾಕೃತಿಕವಾಗಿ ನಿರ್ಮಾಣವಾದುದಾಗಿದ್ದರೂ, ಸೇತುವೆಯಲ್ಲಿರುವ ಕಲ್ಲಿನ ಬಂಡೆಗಳು ಮಾತ್ರ ಬೇರೆಡೆಯಿಂದ ಸ್ಥಳಾಂತರಿಸಿ ನಿರ್ಮಾಣ ಮಾಡಿದ್ದಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಮ ಸೇತುವೆ ವಿಚಾರ ದೇಶದಲ್ಲಿ ಸಾಕಷ್ಟು ವಿವಾದವನ್ನು ಈಗಾಗಲೇ ಸೃಷ್ಟಿಸಿದೆ. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಮಸೇತುವೆ ಧಕ್ಕೆ ತರುವಂತಹ ಶಿಪ್ಪಿಂಗ್ ಕೆನಾಲ್ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಹಿಂದೂಗಳ ಭಾವನಾತ್ಮಕ ವಿಚಾರದ ಹಿನ್ನೆಲೆಯಲ್ಲಿ ಬಿಜೆಪಿ ಈ ವಿಚಾರವನ್ನು ನ್ಯಾಯಾಲಯಕ್ಕೆ ಕೊಂಡೊಯ್ದು ನಿರ್ಮಾಣವನ್ನು ತಡೆದಿತ್ತು.
ಪ್ರಸ್ತುತ ರಾಮಸೇತುವ ವಿಚಾರದಲ್ಲಿ ಬಹಳಷ್ಟು ಉದ್ದೇಶ ಪೂರ್ವಕ ಗೊಂದಲಗಳನ್ನು ಸೃಷ್ಠಿಸಲಾಗುತ್ತಲೇ ಇದೆ. ಈ ನಡುವೆಯೇ, ಅಮೆರಿಕಾದ ಈ ವರದಿ ಹಿಂದೂಗಳಿಗೆ ಸಂತಸ ಮೂಡಿಸಿದೆ.
ಇನ್ನು ಈ ವರದಿ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಜೈ ಶ್ರೀರಾಮ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.