ಮಂಗಳೂರು : ನಗರದ ಜಪ್ಪಿನಮೊಗರುವಿನಲ್ಲಿ ಮೇ 9ರಂದು ರಾತ್ರಿ ಪೊಲೀಸ್ ಕಾರ್ಯಾಚರಣೆಯ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದ ರೌಡಿಶೀಟರ್ ಗೌರೀಶ್ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಈತನನ್ನು ಶುಕ್ರವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ಇರಿಸಲಾಗಿದೆ.
ರೌಡಿಶೀಟರ್ ಗೌರೀಶ್ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲು ಸಿಸಿಬಿ ಪೊಲೀಸ್ ತಂಡ ಮೇ 9ರಂದು ರಾತ್ರಿ 11 ಗಂಟೆ ವೇಳೆಗೆ ಜಪ್ಪಿನಮೊಗರುವಿಗೆ ತೆರಳಿದ ಸಂದರ್ಭದಲ್ಲಿ ಆತ ಪೊಲೀಸ್ ಸಿಬ್ಬಂದಿ ಮೇಲೆ ಚೂರಿಯಿಂದ ದಾಳಿ ನಡೆಸಿದ್ದನು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರು. ಇದರಿಂದ ಗೌರೀಶ್ ಗಾಯಗೊಂಡಿದ್ದನು.
ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿದ್ದ ಗೌರೀಶನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎಂಟು ದಿನಗಳಿಂದ ಆತ ಚಿಕಿತ್ಸೆ ಪಡೆಯುತ್ತಾ ಆಸ್ಪತ್ರೆಯಲ್ಲಿದ್ದ. ಆತ ಇನ್ನು ಮುಂದೆ ಜೈಲುವಾಸ ಅನುಭವಿಸಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆಯ ವೇಳೆ ರೌಡಿಶೀಟರ್ ಗೌರೀಶ್ ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದಾಗ ಹೆಡ್‍ಕಾನ್‍ಸ್ಟೇಬಲ್ ಶೀನಪ್ಪ ಗಾಯಗೊಂಡಿದ್ದರು. ಅವರು ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾರೆ.