ಬೆಂಗಳೂರು: ಅಶೋಕನಗರದ ರೌಡಿಶೀಟರ್ ವಿನೋದ್ ಅಲಿಯಾಸ್ ಪಚ್ಚೆ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬನ್ನೇರುಘಟ್ಟ ಮುಖ್ಯರಸ್ತೆಯ ಬಳಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅಶೋಕ್ನಗರ ಠಾಣೆ ಇನ್ಸ್ಪೆಕ್ಟರ್ ಶಶಿಧರ್, ರೌಡಿಶೀಟರ್ ಕಾಲಿಗೆ ಶೂಟ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಅಶೋಕನಗರ ಠಾಣೆ ಹಾಗೂ ನಗರದ ವಿವಿಧ ಪೊಲೀಸ್ ಸ್ಟೇಷನ್ಗಳಲ್ಲಿ ಈತನ ಮೇಲೆ 10ಕ್ಕೂ ಹೆಚ್ಚು ಕೇಸ್ಗಳಿವೆ. ರಾಬರಿ, ಕೊಲೆ ಯತ್ನದ ಆರೋಪದಲ್ಲಿ ವಿನೋದ್ ಪೊಲೀಸರಿಗೆ ಪ್ರಮುಖವಾಗಿ ಬೇಕಾಗಿದ್ದ.
ಅದರಂತೆ ನಿನ್ನೆ ರಾತ್ರಿ ಆರೋಪಿ ಬಗ್ಗೆ ಖಚಿತ ಮಾಹಿತಿ ಪಡೆದ ಅಶೋಕನಗರ ಪೊಲೀಸರು, ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸ್ಮಶಾನಕ್ಕೆ ಎಂಟ್ರಿ ನೀಡಿ ಕಾರ್ಯಾಚರಣೆ ಶುರು ಮಾಡಿದ್ದರು. ಆಗ ರೌಡಿಶೀಟರ್ ವಿನೋದ್ ನೋಡಿದ ಪೊಲೀಸರು ಕೂಡಲೇ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಒಪ್ಪದ ರೌಡಿಶೀಟ್, ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದ.
ಹೀಗಾಗಿ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಶಶಿಧರ್, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್ಸ್ಪೆಕ್ಟರ್ ಗುಂಡೇಟಿಗೆ ಆರೋಪಿಯ ಬಲಗಾಲಿಗೆ ಏಟಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.