Monday, January 20, 2025
ಸಿನಿಮಾಸುದ್ದಿ

ಅಮರ್ ಚಿತ್ರದಲ್ಲಿ ನಟಿಸಲು ರಜನಿಕಾಂತ್ ರೆಡಿ ಇದ್ರು!– ಕಹಳೆ ನ್ಯೂಸ್

ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ “ಅಮರ್’ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಇದೇ ಮೇ 31ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು ಚಿತ್ರತಂಡ ಭರ್ಜರಿಯಾಗಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದ್ದು, ಇದೇ ವೇಳೆ “ಅಮರ್’ ಚಿತ್ರ ತೆರೆಮರೆಯ ಕುರಿತಾಗಿ ಒಂದೊಂದೆ ಸಂಗತಿಗಳು ಹೊರಬೀಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯವಾಗಿ “ಅಮರ್’ ಚಿತ್ರದಲ್ಲಿ ನಟಿಸಲು ರಜನಿಕಾಂತ್ ಕೂಡಾ ಸಿದ್ಧವಿದ್ದರು ಎಂಬ ಅಂಶವನ್ನು ಚಿತ್ರತಂಡ ಬಾಯಿಬಿಟ್ಟಿದೆ. ಹೌದು, ಅಂಬರೀಶ್ ಪುತ್ರನ ಚೊಚ್ಚಲ ಚಿತ್ರದಲ್ಲಿ ಬಣ್ಣ ಹಚ್ಚಲು ಅಂಬರೀಶ್ ಅವರ ಚಿತ್ರರಂಗದ ಸ್ನೇಹಿತರಾದ ರಜನಿಕಾಂತ್, ಶತ್ರುಘ್ನ ಸಿನ್ಹಾ, ಚಿರಂಜೀವಿ, ಮೋಹನ್ ಬಾಬು ಹೀಗೆ ಅನೇಕ ಸ್ಟಾರ್ ನಟರು ಆಸಕ್ತಿಯನ್ನು ತೋರಿಸಿದ್ದರಂತೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದ ಪ್ರಮೋಶನ್ ವೇಳೆ ಅಂಬರೀಶ್ ಪುತ್ರ ಅಭಿಷೇಕ್ ಮತ್ತು “ಅಮರ್’ ಚಿತ್ರದ ನಿರ್ದೇಶಕ ನಾಗಶೇಖರ್ ಇಂಥದ್ದೊಂದು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. “ಅಮರ್’ ಚಿತ್ರದಲ್ಲಿ ತಾವು ಕೂಡ ಒಂದು ಪಾತ್ರವಾಗಬೇಕು ಎಂಬ ಆಸೆಯಿಂದ, ಚಿತ್ರ ಶುರುವಾಗುವ ಮೊದಲೇ ರಜನಿಕಾಂತ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಹೀಗೆ ಹಲವು ಸ್ಟಾರ್ ನಟರು ತಮ್ಮ ಆಸೆಯನ್ನ ಅಂಬರೀಶ್ ಮುಂದೆ ಹೇಳಿಕೊಂಡಿದ್ದರಂತೆ.

ಈ ಬಗ್ಗೆ ಮಾತನಾಡಿದ ಅಭಿಷೇಕ್, “ನಮ್ಮ ತಂದೆಯ ಪ್ರೀತಿಯಿಂದಾಗಿ ಚಿತ್ರದಲ್ಲಿ ರಜಿನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಕೂಡ ನಟಿಸೋದಾಗಿ ಹೇಳಿದ್ರು. ರಜಿನಿಕಾಂತ್ ಸರ್ ಭಿಕ್ಷುಕನ ಪಾತ್ರವಾದ್ರೂ ಸೈ ನಟಿಸ್ತೀನಿ ಅಂತಾ ನಮ್ಮ ನಿರ್ಮಾಪಕರ ಬಳಿ ಹೇಳಿದ್ರಂತೆ’ ಎಂದಿದ್ದಾರೆ. ಇನ್ನು, ಮೋಹನ್ ಬಾಬು, “ನಾನು ವಿಲನ್ ಆಗಿ ನಟಿಸಲು ರೆಡಿ’ ಅಂದಿದ್ದರಂತೆ.

ಆದರೆ, ಅವರೆಲ್ಲ ದೊಡ್ಡ ಕಲಾವಿದರಾಗಿದ್ದು, ಅವರಿಗೆ ಸೂಕ್ತವೆನಿಸುವ ಪಾತ್ರ ಚಿತ್ರದಲ್ಲಿರದಿದ್ದರೆ ಅವರಿಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ಎಂಬ ಕಾರಣಕ್ಕೆ ಸ್ವತಃ ಅಂಬರೀಶ್ ಅವರೇ ಅಂಥ ಘಟಾನುಘಟಿ ಸ್ಟಾರ್ಗಳನ್ನು ಚಿತ್ರದಲ್ಲಿ ಸೇರಿಸಿಕೊಳ್ಳಲು ಮನಸ್ಸು ಮಾಡಲಿಲ್ಲವಂತೆ. ಇನ್ನು, “ಅಮರ್’ ಚಿತ್ರದಲ್ಲಿ ಎಲ್ಲಾ ಸ್ಟಾರ್ಗಳನ್ನು ಸೇರಿಸಿ ಒಂದು ಹಾಡು ಮಾಡುವ ಯೋಚನೆ ಕೂಡಾ ಇತ್ತು.

ಆದರೆ, ಚಿತ್ರತಂಡ ಆ ಆಸೆಯನ್ನು ಕೈ ಬಿಟ್ಟಿದೆ. ಅದಕ್ಕೆ ಕಾರಣ ಅಂಬರೀಶ್ ನಿಧನ. “ಎಲ್ಲಾ ಸ್ಟಾರ್ಗಳನ್ನು ಸೇರಿಸಿ ಕಲರ್ಫುಲ್ ಆಗಿ ಒಂದು ಹಾಡು ಮಾಡಬೇಕೆಂಬುದು ಅಂಬರೀಶ್ ಅವರ ಕನಸಾಗಿತ್ತು. ಆದರೆ, ಅಂಬರೀಶ್ ಅವರೇ ಇಲ್ಲದ ಮೇಲೆ ಆ ಹಾಡು ಮಾಡಿ ಸಂಭ್ರಮಿಸುವ ಮನಸ್ಸು ಚಿತ್ರತಂಡಕ್ಕಿರಲಿಲ್ಲ. ಹಾಗಾಗಿ, ಆ ಹಾಡನ್ನು ಕೈ ಬಿಟ್ಟೆವು’ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.

ಕೊಡಗಿನ ಹಾಡು: “ಅಮರ್’ ಚಿತ್ರದ ಹಾಡಿನಲ್ಲೂ ಒಂದು ವಿಶೇಷವಿದೆಯಂತೆ. ಅದೇನಪ್ಪ ಅಂದ್ರೆ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಒಂದು ಕೊಡಗು ಭಾಷೆಯ ಹಾಡನ್ನು ಪೂರ್ಣವಾಗಿ ಕೇಳಬಹುದು. ಈ ಬಗ್ಗೆ ಮಾತನಾಡುವ ನಿರ್ದೇಶಕ ನಾಗಶೇಖರ್, “ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಕೊಡಗು ಭಾಷೆಯ ಸಾಹಿತ್ಯವಿರುವ ಹಾಡನ್ನು ಒಂದೆರಡು ಸಾಲುಗಳಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಯಾವ ಕನ್ನಡ ಚಿತ್ರದಲ್ಲೂ ಕೊಡಗು ಭಾಷೆಯ ಹಾಡನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ.

ಆದರೆ ಇದೇ ಮೊದಲ ಬಾರಿಗೆ “ಅಮರ್’ ಚಿತ್ರದಲ್ಲಿ ಸಂಪೂರ್ಣ ಕೊಡಗು ಭಾಷೆಯ ಸಾಹಿತ್ಯವಿರುವ ಹಾಡನ್ನು ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ’ ಎಂದಿದ್ದಾರೆ. ಈ ಹಾಡಿಗೆ ಕಿರಣ್ ಕಾವೇರಿಯಪ್ಪ ಸಾಹಿತ್ಯವನ್ನು ಬರೆದಿದ್ದಾರೆ. ಜೆಸ್ಸಿಗಿಫ್ಟ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿಭಿನ್ನ ಶೈಲಿಯಲ್ಲಿರುವ ಈ ಹಾಡು ಕನ್ನಡದ ಸಿನಿಪ್ರಿಯರಿಗೆ ಇಷ್ಟವಾಗುವುದೆಂಬ ನಂಬಿಕೆ “ಅಮರ್’ ಚಿತ್ರತಂಡದ್ದು.

ಅಂದಹಾಗೆ, “ಅಮರ್’ ಚಿತ್ರ ನೈಜ ಘಟನೆಯಿಂದ ಪ್ರೇರಿತವಾಗಿದ್ದು, 90ರ ದಶಕದಲ್ಲಿ ಪಂಚಭಾಷಾ ನಾಯಕಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ನಾಗಶೇಖರ್ ಈ ಚಿತ್ರವನ್ನು ಮಾಡಿದ್ದಾರಂತೆ. ಆ ನಟಿ ಯಾರು ಎಂಬ ಕುತೂಹಲಕ್ಕೆ ಚಿತ್ರ ತೆರೆಕಾಣುವವರೆಗೆ ಕಾಯಲೇಬೇಕು.