Monday, November 18, 2024
ಸುದ್ದಿ

ಮಲೆನಾಡಿನ ಮೈ ಮಾಟ…ಕಹಳೆ ನ್ಯೂಸ್

ಮಲೆನಾಡಿನ ಮೈ ಮಾಟ…
                  (ಕಾಫಿನಾಡಿನತ್ತ ಒಂದು ರೌಂಡ್)

ಅದೇ ಆಫೀಸ್.. ಅದೇ ಕೆಲ್ಸ… ಈ ಏಕತಾನತೆಯಿಂದ ರೋಸಿ ಹೋಗಿದೆ ನಮ್ಮ ಲೈಫ್. ಇದ್ರ ನಡುವೆ ನಮ್ಮ ಮನಸ್ಸು ಅಟ್ಲೀಸ್ಟ್ ಒಂದು ದಿನದಮಟ್ಟಿಗೆ ಜಾಲಿ ರೈಡ್ ಬಯಸಿತ್ತು. ಈ ನಗರದ ಜಂಜಾಟದಿಂದ ದೂರ.. ಅದೆಲ್ಲೋ ಕಳೆದು ಹೋಗೋ ಮನಸು ನಮ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೆಳೆಯರೆಲ್ಲಾ ಜೊತೆಯಾಗಿ ಪ್ರವಾಸ ಹೊಂಟ್ರೆ ಅದ್ರ ಮಜಾನೇ ಬೇರೆ. ಆ ದಿಸೆಯಲ್ಲಿ ನಮ್ಮ ಚಾಯ್ ಪೆ ಚರ್ಚಾ… ಅಂತೂ ಒಂದು ದಿನ ಒಂದು ಪ್ಲೇಸ್ ನಿಗದಿಯಾಯ್ತು…
ಮಲೆನಾಡ ಸೊಬಗಿನ ಚಿಕ್ಕಮಗಳೂರು… ನಮ್ಮ ಡೆಸ್ಟಿನೇಷನ್. ಅಲ್ಲಿನ ಸೌಂದರ್ಯವನ್ನ ಕೇವಲ ದೃಶ್ಯ ಮಾಧ್ಯಮಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದೆವಷ್ಟೇ… ಅದು ನನಸಾಗೋ ಕ್ಷಣ…
ಆದ್ರೆ ನಿಗದಿಯಾದ ದಿನ ಕಾರಣಾಂತರಗಳಿಂದ ನಮ್ಮ ಪಯಣ ಸಾಧ್ಯವಾಗ್ಲೇ ಇಲ್ಲ…ಮರುದಿನ ಎರಡು ಮೋಟಾರ್ ಬೈಕ್ನ ಕಿವಿಹಿಂಡಿ ಹೊರಟೇ ಬಿಟ್ಟೆವು.

ಪುತ್ತೂರಿನಿಂದ ಸರಿ ಸುಮಾರು 150 ಕಿಲೋಮೀಟರ್ ಅಂತರ, ಉಜಿರೆ ಮಾರ್ಗವಾಗಿ ಘಾಟಿ ಹತ್ತಿ ಮಲೆನಾಡಿನ ಮೈಸಿರಿಯನ್ನ ಆ ರವಿಯ ಕಿರಣಗಳ ಹೂ ಚುಂಬನದಲ್ಲಿ ಆಸ್ವಾದಿಸೋ ಕ್ಷಣಕ್ಕಾಗಿ ಕಾತರದ ಪಯಣ.. ದಾರಿಯುದ್ದಕ್ಕೂ ಚೆಲ್ಲಿದ ಹಸಿರ ಸಿರಿ ಜೊತೆಗೆ ಮನಸಿಗೆ ಮುದ ನೀಡುವ ವಾತವರಣದಲ್ಲೊಂದಿಷ್ಟು ಗೆಳೆಯರೊಂದಿಗಿನ ಸೆಲ್ಫಿ…

ಚಿಕ್ಕಮಗಳೂರು ಅಂದ್ರೆ ಹಾಗೇನೇ ಈಗ ತಾನೆ ಮಿಂದೆದ್ದು ಬಂದ ನವ ತರುಣಿ. ಆ ಸೌಂದರ್ಯ ನೋಡಲು ಕಣ್ಣೆರಡು ಸಾಲದು. ಮುಳ್ಳಯನಗಿರಿ, ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಬಾಬಾಬುಡನ್‍ಗಿರಿ ಬೆಟ್ಟ ಸಾಲಿನ ಹಾಗೂ ಕರ್ನಾಟಕದ ಅತೀ ಎತ್ತರದ ಪರ್ವತಶಿಖರ. ಈ ಬೆಟ್ಟದ ತುದಿಯಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ. ಇದರಿಂದಾಗಿ ಈ ಶಿಖರಕ್ಕೆ ಮುಳ್ಳಯ್ಯನಗಿರಿ ಎಂದು ನಾಮಾಂಕಿತವಾಗಿದೆ. ಇನ್ನು ದತ್ತಪೀಠ, ಇದ್ರ ಬಗ್ಗೆ ಹೆಚ್ಚೇನೂ ಹೇಳ್ಬೇಕಾಗಿಲ್ಲ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿದೆ. ಇದೊಂದು ಗುಹಾಂತರ ದೇವಾಲಯ ಹಾಗೂ ಶ್ರದ್ದಾಕೇಂದ್ರ. ಅಲ್ಲಿಂದ ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ ನಯನಮನೋಹರ ಮಾಣಿಕ್ಯದಾರ, ಒಂದು ಸಣ್ಣ ತೊರೆ ಸರಿ ಸುಮಾರು100 ಅಡಿ ಎತ್ತರದಿಂದ ಧುಮ್ಮಿಕ್ಕಿ ಜಲಪಾತವನ್ನ ನಿರ್ಮಿಸಿದೆ. ಈ ಜಲಪಾತ ಮೇಲಿನಿಂದ ಧುಮ್ಮಿಕ್ಕುವ ರಭಸಕ್ಕೆ ನೀರು ಮಣಿ ಮುತ್ತುಗಳಂತೆ ಕಾಣಿಸುವುದರಿಂದ ಈ ಹೆಸರು ಬಂದಿದೆ.ಮಾಣಿಕ್ಯಧಾರದ ಹನಿಗಳ ಮುತ್ತಿನ ಸಿಂಚನದಲ್ಲಿ ಮೈವರೆತ ನಮಗೆ ಅಲ್ಲೇ ಉಳಿಯುವ ಮನಸು. ಆದ್ರೆ ಇನ್ನೂ ನೋಡ ಬೇಕಾದ ಸ್ಥಳಗಳು ಹಲವಿದ್ದುದರಿಂದ ಒಲ್ಲದ ಮನಸಿನಿಂದ ಮಾಣಿಕ್ಯಧಾರೆಯ ನೆನಪನ್ನ ಹೊತ್ತು ಮುನ್ನಡೆದೆವು. ನಂತ್ರ ಮುಳ್ಳಯ್ಯನ ಗಿರಿಯ ಪಕ್ಕದಲ್ಲೇ ಇರೋ ಸೀತಾಳಯ್ಯನಗಿರಿಯತ್ತ ನಮ್ಮ ಪಯಣ. ಗಿರಿಯ ನೆತ್ತಿಯಲಿರೋ ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದಿಂದ ಈ ಹೆಸರು ಪಡೆದ ಗಿರಿಯ ಪ್ರಾಕೃತಿಕ ಸೌಂದರ್ಯವನ್ನ ಕಂಡು ಪುಳಕಿತರಾದೆವು.

ಪ್ರಕೃತಿಮಾತೆಯ ಮಡಿಲಲ್ಲಿ ನಿಸರ್ಗದ ಕೈತುತ್ತನ್ನ ಸವಿಯೋ ಬಯಕೆ ಯಾರಿಗಿಲ್ಲ ಹೇಳಿ…? ದಟ್ಟ ಮಂಜಿನ ಮಧ್ಯೆ ರಸ್ತೆಗಳ ಇಕ್ಕೆಲಗಳಲ್ಲಿ ಮೈದುಂಬಿಕೊಂಡಿರೋ ಹಚ್ಚಹಸಿರು… ದಾರಿಯುದ್ದಕ್ಕೂ ತಮ್ಮ ವೈಭವವನ್ನುಣಿಸಲು ಕೈ ಬೀಸಿ ಕರೆಯೋ ಪರ್ವತಗಳ ಸಾಲು .. ಈ ಸೌಂದರ್ಯದ ಗಣಿಯನ್ನ ಕಣ್ಣಲಿ ಅಗೆದಷ್ಟೂ ಮುಗಿಯದು. ಆದ್ರೆ ಕೆಲ ಪ್ರವಾಸಿಗರ ವಿಕೃತಿಗೆ ಈ ತಾಣವೂ ಹೊರತಲ್ಲ ಎಂಬ ಸತ್ಯವೂ ಅಲ್ಲಲ್ಲಿ ಕಣ್ಣಗೆ ರಾಚುತ್ತಿತ್ತು. ಇಲ್ಲಿನ ರಸ್ತೆಗಳಲ್ಲಿ ಬೈಕ್ ರೈಡ್ ತುಂಬಾನೇ ಅಪಾಯ. ಸ್ವಲ್ಪ ಎಚ್ಚರ ತಪ್ಪಿದ್ರೂ ದೊಡ್ಡ ಪ್ರಪಾತ ಬಾಯ್ದೆರೆದು ಕಾದಿದೆ ಅನ್ಸುತ್ತೆ..

ಮಲೆನಾಡಿನ ಸೊಬಗನ್ನು ಸವಿದ ನಮಗೆ ಸಮಯ ಸರಿದ ಪರಿವೇ ಇರಲಿಲ್ಲ… ಅಂತೂ ಮನಸಿಲ್ಲದ ಮನಸಿನಿಂದ ಚಿಕ್ಕಮಗಳೂರ ಪ್ರಕೃತಿಗೆ ಕೈ ಬೀಸಿ ಹೊರಟು ಮೂಡಿಗೆರೆ ತಲಪುವಾಗ ರಾತ್ರಿ 10.30. ಕೊಟ್ಟಿಗೆಹಾರದಲ್ಲಿ ರಾತ್ರಿಯ ಊಟ ಮುಗಿಸಿ. ಮತ್ತೆ ಪುತ್ತೂರಿನ ಕಡೆಗೆ ಪಯಣ. ಪಯಣದ ನಡುವೆ ಸಣ್ಣ ತೊಂದರೆಯೊಂದು ಧುತ್ತನೆ ಎದುರಾಯ್ತು ಗೆಳೆಯ ನಿತಿನ್ ಸವಾರಿ ಮಾಡುತ್ತಿದ್ದ ಬುಲೆಟ್ ಬೈಕ್‍ನ ಬ್ರೇಕ್ ಲೂಸ್ ಆಗಿ ಬೈಕನ್ನು ನಿಲ್ಲಿಸುವಷ್ಟರಲ್ಲಿ ಹರಸಾಹಸ ಪಡಬೇಕಿತ್ತು. ಆದ್ರೆ ತನ್ನ ಚಾಕಚಕ್ಯತೆಯಿಂದ ಬೈಕಿನ ಸವಾರಿಯನ್ನು ತಹಬದಿಗೆ ತಂದು ಏನೂ ತೊಂದರೆಯಾಗದ ರೀತಿಯಲ್ಲಿ ಘಾಟಿ ಇಳಿಸಿದ್ದ.

ಉಜಿರೆ ಸಮೀಪ ತಲುಪಿದಾಗ ನಮ್ಮನ ಅದಾಗ್ಲೇ ಚಳಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಲ್ಲೆ ಬಿಸಿ ಬಿಸಿ ಚಾ ಹಾಗೂ ಆ ಚಳಿಯಲ್ಲಿ ಸವಿದ ಐಸ್ ಕ್ರೀಂನ ಮಜಾ ವರ್ಣನಾತೀತ. ಅದನ್ನ ಚಪ್ಪರಿಸುತ್ತಾ ಹೊರಟ ನಮ್ಮ ಬೈಕ್ ನಿಂತದ್ದು ಪುತ್ತೂರಿನಲ್ಲಿ. ಹೀಗೆ ಧಾವಂತದ ಬದುಕಿನ ಜಂಜಡದಿಂದ ದೂರವಾಗಿಸಿದ, ಗೆಳೆಯರೊಂದಿಗಿನ ಒಂದು ದಿನದ ಪಯಣ ನೆನಪಿನ ತಿಜೋರಿಯಲ್ಲಿ ಎಂದಿಗೂ ಅಮರ. ನೀವೂ ಧಾವಂತದ ಬದುಕಿನ ಸುಳಿಗೆ ಸಿಲುಕಿದ್ದಲ್ಲಿ ಇನ್ನೇಕೆ ತಡ, ಗೆಳೆಯ-ಗೆಳತಿಯರ ಜೊತೆಯಾಗಿ ಹಿತವಾಗಿ ಅಂತ ಮಲೆನಾಡ ಸೊಬಗನ್ನ ಒಮ್ಮೆ ಸವಿದು ಬನ್ನಿ.

ಬರಹ : ಪ್ರಸನ್ನ ಭಟ್ ಕುರುವೇರಿ