ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿರುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ಇಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬಾಕಿ ಇರುವಾಗಲೇ ಮೋದಿಯ ಕೇದಾರನಾಥ ಯಾತ್ರೆಯ ಬಗ್ಗೆ ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಹೆಚ್ಚಾಗಿ ತೋರಿಸಲಾಗುತ್ತಿದೆ.
ಇದು ನೀತಿ ಸಂಹಿತೆಯ ಉಲ್ಲಂಘನೆ, ಸಂಪೂರ್ಣ ಅನೈತಿಕವಾದುದು ಎಂದು ಟಿಎಂಸಿ ವಕ್ತಾರ ಡೆರೆಕ್ ಓ ಬ್ರಿಯೇನ್, ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಮೋದಿ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಕೇದಾರನಾಥ ದೇವಾಲಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೆಡಿ ಇದೆ ಎಂದು ಹೇಳಿದ್ದಾರೆ. ಇದು ನೈತಿಕವಾಗಿ ತಪ್ಪು. ಮೋದಿ ಭೇಟಿಯ ಪ್ರತಿಯೊಂದು ಸಣ್ಣಪುಟ್ಟ ವಿವರಗಳನ್ನೂ ಪ್ರಸಾರ ಮಾಡಲಾಗುತ್ತಿದೆ.
ಇದರ ಉದ್ದೇಶ ನೇರವಾಗಿ ಅಥವಾ ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರುವುದಾಗಿದೆ. ವಿಡಿಯೋಗಳಲ್ಲಿ ಮೋದಿ ಮೋದಿ ಅನ್ನೋ ಘೋಷಣೆಗಳನ್ನ ಬ್ಯಾಗ್ರೌಂಡ್‍ನಲ್ಲಿ ಕೇಳಬಹುದು. ಈ ಎಲ್ಲಾ ನಡೆಗಳ ಹಿಂದೆ ಸಾಕಷ್ಟು ಲೆಕ್ಕಾಚಾರ ಇದೆ. ಚುನಾವಣೆಯ ದಿನ ಮತದಾರರ ಮೇಲೆ ಪ್ರಭಾವ ಬೀರುವುದು ಇದರ ಉದ್ದೇಶ ಎಂದು ಅವರು ಆರೋಪಿಸಿದ್ದಾರೆ. ಇಂದು ಮೋದಿ ಎರಡನೇ ದಿನದ ಪ್ರವಾಸದಲ್ಲಿದ್ದು, ಕೇದಾರನಾಥದಿಂದ ಬದ್ರಿನಾಥಕ್ಕೆ ತೆರಳಿದ್ದಾರೆ.
ಕೇದಾರನಾಥ ದೇವಾಲಯದಲ್ಲಿ ಇಂದು ಬೆಳಗ್ಗೆ ಮಾತನಾಡಿದ ಅವರು, ಕೇದಾರನಾಥದೊಂದಿಗೆ ನನಗೆ ವಿಶೇಷ ಸಂಬಂಧವಿದೆ. 2013ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ನಂತರ ಕೇದಾರನಾಥದ ಮರುಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿದ್ದೇವೆ ಎಂದು ಹೇಳಿದ್ರು.